ಶಿವಮೊಗ್ಗ: ಕಾಂಗ್ರೆಸ್ ಗೆದ್ದರೆ ನಿಮ್ಮ ಮಂಗಳ ಸೂತ್ರವನ್ನು ಕಸಿದು ಮುಸ್ಲಿಮರಿಗೆ ಕೊಡುತ್ತದೆ ಎಂದು ಪ್ರಧಾನಿ ಮೋದಿ ನೀಡಿದ ಹೇಳಿಕೆ ಕೋಮು ಭಾವನೆ ಕೆರಳಿಸುವಂತಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಬಲಿಗರೊಂದಿಗೆ ಪೋಲಿಸ್ ಠಾಣೆಗೆ ಆಗಮಿಸಿದ ಕಿಮ್ಮನೆ ರತ್ನಾಕರ್ ದೂರು ನೀಡಿದ್ದು, ಪ್ರಧಾನಿ ಮೋದಿ ಅವರ ಹೇಳಿಕೆ ಸಮುದಾಯಗಳ ನಡುವೆ ದ್ವೇಷ ಕೋಮು ಭಾವನೆ ಕೆರಳಿಸುವಂತಿದೆ. ರಾಜ್ಯ, ದೇಶದ ಶಾಂತಿ ಸುವ್ಯವಸ್ಥೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹೇಳಿಕೆ ಪ್ರಧಾನಿಯವರ ಸೋಲಿನ ಭಯ ಮತ್ತು ಹತಾಶೆಯ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.
ಹಿಂದೂ ಮಹಿಳೆಯರ ಭಾವನೆಗಳನ್ನು ಕೆರಳಿಸುವ ಮೂಲಕ ಧರ್ಮಗಳ ಮಧ್ಯೆ ದ್ವೇಷ ಹರಡುವ ಹೇಳಿಕೆ ಇದಾಗಿದೆ. ಆ ಮೂಲಕ ಮತ ಗಳಿಸುವ ವ್ಯವಸ್ಥಿತ ಸಂಚು ಅಡಗಿದೆ. ಹೀಗಾಗಿ ಹೇಳಿಕೆ ನೀಡಿದ ಪ್ರಧಾನಿ ಮೋದಿ ಅವರ ವಿರುದ್ಧ ಮತ್ತು ಹೇಳಿಕೆ ಪ್ರಕಟಿಸಿದ ಪತ್ರಿಕೆಯ ವಿರುದ್ಧ ಕ್ರಮ ಜರುಗಿಸುವಂತೆ ಕಿಮ್ಮನೆ ರತ್ನಾಕರ್ ಪೊಲೀಸರಿಗೆ ದೂರು ನೀಡಿದ್ದಾರೆ.