ಭಾರತದ ಒಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಭಯೋತ್ಪಾದಕನೊಬ್ಬನನ್ನು ನಿಯಂತ್ರಣ ರೇಖೆ ಬಳಿ ಕೊಂದಿರುವ ಭಾರತೀಯ ಸೇನೆ ಆತನ ಹೆಣವನ್ನು ಬಂದು ತೆಗೆದುಕೊಂಡು ಹೋಗಲು ಪಾಕ್ ಸೇನೆಗೆ ಹಾಟ್‌ಲೈನ್ ಮೂಲಕ ಕರೆ ಮಾಡಿ ತಿಳಿಸಿದೆ.
“ನಿಯಂತ್ರಣ ರೇಖೆ ಬಳಿ ಎರಡೂ ಸೇನೆಗಳ ನಡುವಿನ ಕದನ ವಿರಾಮದ ಸಂಪೂರ್ಣ ಉಲ್ಲಂಘನೆಯೊಂದರಲ್ಲಿ, ಕುಪ್ವಾರಾ ಜಿಲ್ಲೆಯ ಕೆರಣ್ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಬ್ಯಾಟ್ ಪಡೆಯ ಪ್ರಯತ್ನವೊಂದನ್ನು ಜನವರಿ 1ರಂದು ವಿಫಲಗೊಳಿಸಲಾಯಿತು.
ನಿಯಂತ್ರಣ ರೇಖೆ ಬಳಿ ನಿಯೋಜಿತರಾದ ತುಕಡಿಗಳು ನಡೆಸಿದ ತ್ವರಿತ ಕಾರ್ಯಾಚರಣೆಯೊಂದರಲ್ಲಿ ಮೊಹಮ್ಮದ್ ಶಬ್ಬೀರ್ ಮಲಿಕ್ ಎಂದು ಬಳಿಕ ಗುರುತಿಸಲಾದ ಭಯೋತ್ಪಾದಕನೊಬ್ಬನನ್ನು ಕೊಂದಿದ್ದಾರೆ, ಈತ ಪಾಕಿಸ್ತಾನೀ ಪ್ರಜೆ ಎಂದು ಕುಪ್ವಾರಾದಲ್ಲಿರುವ ಭಾರತೀಯ ಸೇನೆಯ 28 ಡಿವಿಷನ್‌ನ ಕಮಾಂಡಿಂಗ್ ಅಧಿಕಾರಿ ಮೇಜರ್ ಜನರಲ್ ಅಭಿಜಿತ್ ಎಸ್ ಪೆಂಡಾರ್ಕರ್ ತಿಳಿಸಿದ್ದಾರೆ.
“ಗಡಿಯಾಚೆಗೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನ ಸೇನೆ ಪ್ರಚೋದನೆ ಕೊಡುತ್ತಿದೆ ಎಂದು ಈ ಮೂಲಕ ಸಂಪೂರ್ಣವಾಗಿ ಸ್ಥಾಪಿತವಾಗಿದೆ. ಕೊಂದು ಹಾಕಲಾದವನ ದೇಹವನ್ನು ಬಂದು ಕೊಂಡೊಯ್ಯಲು ಪಾಕಿಸ್ತಾನಿ ಸೇನೆಗೆ ಹಾಟ್‌ಲೈನ್ ಮೂಲಕ ಸಂಪರ್ಕ ಸಾಧಿಸಲಾಗಿದೆ,” ಎಂದು ಪೆಂಡಾರ್ಕರ್ ತಿಳಿಸಿದ್ದಾರೆ.
ಸತ್ತು ಬಿದ್ದ ಭಯೋತ್ಪಾದಕನ ಬಳಿ ಪಾಕಿಸ್ತಾನದ ರಾಷ್ಟ್ರೀಯ ಗುರುತಿನ ಚೀಟಿ, ಅಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆ ನಿಯಂತ್ರಣ ಮತ್ತು ಸಹಕಾರ ಸಚಿವಾಲಯ ವಿತರಿಸಿದ ಕೋವಿಡ್ ಲಸಿಕಾ ಪ್ರಮಾಣ ಪತ್ರಗಳು ಸಿಕ್ಕಿವೆ. ಈತ ಶಬ್ಬೀರ್ ಹೆಸರಿನಲ್ಲಿ ಸೇನೆಯ ಗುರುತಿನ ಫಲಕ ಇರುವ ಸಮವಸ್ತ್ರದಲ್ಲಿ ಇದ್ದ ಭಾವಚಿತ್ರವೂ ಸಹ ಇದೇ ವೇಳೆ ಪತ್ತೆಯಾಗಿದೆ.