ಮೈಸೂರು: ಅನ್ಯ ಧರ್ಮದ ಯುವಕನ ಪ್ರೀತಿಸುತ್ತಿದ್ದ ಯುವತಿಯನ್ನು ಆಕೆಯ ಅಣ್ಣನೇ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಯುವತಿ ರಕ್ಷಿಸಲು ಹೋದ ತಾಯಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿ ಸಮೀಪ ಮರೂರು ಕೆರೆಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಸತೀಶ್ ಅವರ ಪುತ್ರಿ ಧನುಶ್ರೀ(19), ಧನುಶ್ರೀ ತಾಯಿ ಅನಿತಾ(43) ಮೃತಪಟ್ಟವರು. ಆರೋಪಿ ನಿತೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅನ್ಯಕೋಮಿನ ಯುವಕನನ್ನು ತಂಗಿ ಧನುಶ್ರೀ ಪ್ರೀತಿಸುವುದನ್ನು ತಿಳಿದ ನಿತೀಶ್ ಬುದ್ಧಿವಾದ ಹೇಳಿದ್ದ. ಮನೆಯಲ್ಲಿ ಗಲಾಟೆ ಕೂಡ ನಡೆದಿತ್ತು. ಇದರಿಂದ ಆಕ್ರೋಶಗೊಂಡಿದ್ದ ನಿತೀಶ್ ಮಂಗಳವಾರ ರಾತ್ರಿ ಸಂಬಂಧಿಕರ ಅನಾರೋಗ್ಯ ನಿಮಿತ್ತ ನೋಡಿಕೊಂಡು ಬರಲು ತಾಯಿಯೊಂದಿಗೆ ಸಹೋದರಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೊರಟಿದ್ದಾನೆ.
ಮಾರ್ಗ ಮಧ್ಯೆ ಬೈಕ್ ನಿಲ್ಲಿಸಿ ಮರೂರು ಕೆರೆಗೆ ಧನುಶ್ರೀ ತಳ್ಳಿದ್ದಾನೆ. ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮನೆಗೆ ಬಂದು ನಡೆದ ವಿಷಯವನ್ನು ನಿತೀಶ್ ತಿಳಿಸಿದ್ದಾನೆ. ಅಕ್ಕ ಪಕ್ಕದ ಮನೆಯವರು, ಸಂಬಂಧಿಕರು ರಾತ್ರಿಯೇ ಹುಡುಕಾಟ ನಡೆಸಿದರು ಮೃತದೇಹ ಪತ್ತೆಯಾಗಿಲ್ಲ. ಬುಧವಾರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ನಿತೀಶ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಸಂದರ್ಭದಲ್ಲಿ ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾನೆ.