ಬೆಂಗಳೂರು: ಬೆಂಗಳೂರಿನ ಸೂರ್ಯಸಿಟಿ ಸಮೀಪದ ಹಳೆ ಚಂದಾಪುರದಲ್ಲಿ ಯುವಕನೊಬ್ಬ ಕತ್ತು ಹಿಸುಕಿ ತಾಯಿಯ ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಹಾಲಕ್ಷ್ಮಿ(41), ಪುತ್ರ ರಮೇಶ್(21) ಮೃತಪಟ್ಟವರು. ಮೃತರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಚಿಕ್ಕಹಳ್ಳಿಯ ನಿವಾಸಿಗಳಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ತಾಯಿ, ಮಗ ಮತ್ತು ಮಗ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಮದ್ಯ ಸೇವಿಸಿ ಮನೆಗೆ ಬಂದು ಆಗಾಗ ತಾಯಿಯೊಂದಿಗೆ ರಮೇಶ್ ಜಗಳವಾಡುತ್ತಿದ್ದ. ನಿನ್ನೆ ರಾತ್ರಿಯೂ ಕುಡಿದು ಬಂದು ತಾಯಿಯೊಂದಿಗೆ ಜಗಳವಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸೂರ್ಯಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.