ಹೊಸಕೋಟೆ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪ್ರಿಯಕರನೇ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಹೇಮಾವತಿ(32) ಕೊಲೆಯಾದ ಮಹಿಳೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ವೇಣುಗೋಪಾಲ್(35) ಕೊಲೆ ಆರೋಪಿಯಾಗಿದ್ದಾನೆ. ಹೇಮಾವತಿ ಮತ್ತು ವೇಣುಗೋಪಾಲ್ ಬೇರೆ ಬೇರೆ ಮದುವೆಯಾಗಿದ್ದರೂ ಅಕ್ರಮ ಸಂಬಂಧ ಹೊಂದಿದ್ದರು. ಈ ನಡುವೆ ಹೇಮಾವತಿ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿದ ವೇಣುಗೋಪಾಲ್ ಭಾನುವಾರ ರಾತ್ರಿ ಗಲಾಟೆ ಮಾಡಿ ಚಾಕುವಿನಿಂದ ಹೊಟ್ಟೆಯ ಕೆಳಭಾಗಕ್ಕೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಚಿಂತಾಮಣಿಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವೇಣುನನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೊಸಕೋಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.