ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯತಮೆಯ ತಾಯಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆಯ ನಂಜಮ್ಮ(50) ಮೃತಪಟ್ಟವರು. ಹಲವು ವರ್ಷಗಳಿಂದ ಗೋವಿಂದರಾಜ ನಗರದ ಎಸ್.ವಿ.ಜಿ. ನಗರದಲ್ಲಿ ವಾಸವಾಗಿದ್ದ ನಂಜಮ್ಮ ಅವರನ್ನು ಗುರುವಾರ ರಾತ್ರಿ ಆಕೆಯ ಪುತ್ರಿಯ ಪ್ರಿಯಕರ ರಾಘವೇಂದ್ರ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆನೇಕಲ್ ತಾಲೂಕಿನ ರಾಘವೇಂದ್ರನೊಂದಿಗೆ ನಂಜಮ್ಮನ ಮನೆ ಸಮೀಪದಲ್ಲಿಯೇ ವಾಸವಾಗಿದ್ದ ಪುತ್ರಿ ಸಂಬಂಧ ಬೆಳೆಸಿದ್ದಳು. ಇವರ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ನಂಜಮ್ಮ ರಾಘವೇಂದ್ರನಿಂದ ದೂರವಾಗುವಂತೆ ಮಗಳಿಗೆ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ನಂಜಮ್ಮನೊಂದಿಗೆ ಜಗಳವಾಡಿದ ರಾಘವೇಂದ್ರ ಗುರುವಾರ ರಾತ್ರಿ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.