
ಬಾಗಲಕೋಟೆ: ಸಲೂನ್ ನಲ್ಲಿ ತಲೆಗೆ ಬಣ್ಣ ಹಚ್ಚಲು ರೇಟ್ ವಿಚಾರಕ್ಕೆ ವಾಗ್ವಾದ ನಡೆದು ಕತ್ತರಿಯಿಂದ ಗ್ರಾಹಕನನ್ನು ಕ್ಷೌರಿಕ ಬರ್ಬರವಾಗಿ ಕೊಲೆ ಮಾಡಿದ ಘಟನೆ ಆಸಂಗಿಯಲ್ಲಿ ನಡೆದಿದೆ.
22 ವರ್ಷದ ಸಾಗರ್ ಅವಟಿ ಮೃತಪಟ್ಟವರು ಎಂದು ಹೇಳಲಾಗಿದೆ. ಬಾಗಲಕೋಟೆ ಜಿಲ್ಲೆ ರಬಕವಿ -ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಜ್ವಲ್ ಜೆಂಟ್ಸ್ ಪಾರ್ಲರ್ ಮಾಲೀಕ ಸದಾಶಿವ ನಾವಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ತಲೆಗೆ ಬಣ್ಣಹಚ್ಚಲು 20 ರೂಪಾಯಿ ಕೊಡುವುದಾಗಿ ಸಾಗರ್ ಹೇಳಿದ್ದ. ಬೇರೆ ಗ್ರಾಹಕನಿಗೆ ಬಣ್ಣ ಹಚ್ಚುತ್ತಿದ್ದ ಸಲೂನ್ ಮಾಲೀಕ ಲಕ್ಷ್ಮಣ ಅವರಿಗೆ ಸಾಗರ್ ಹೇಳಿದ್ದು, ಮತ್ತೊಬ್ಬ ಗ್ರಾಹಕನಿಗೆ ಕ್ಷೌರ ಮಾಡುತ್ತಿದ್ದ ಮತ್ತೊಬ್ಬ ಮಾಲೀಕ ಸದಾಶಿವ ನಾವಿ ಸಾಗರ್ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ.
ಈ ಹಿಂದೆಯೂ ಸಾಗರ್ ರೇಗಿಸುತ್ತಿದ್ದ ಹಿನ್ನೆಲೆಯಲ್ಲಿ ಸಾಗರ್ ಎದೆಯ ಭಾಗಕ್ಕೆ ಕತ್ತರಿಯಿಂದ ಇರಿದಿದ್ದಾನೆ. ಗಾಯಾಳು ಸಾಗರ್ ನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆರೋಪಿ ಸದಾಶಿವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.