ದೇಹದ ಯಾವುದೇ ಭಾಗ ಸರಿಯಾಗಿ ಕೆಲಸ ಮಾಡದೆ ಹೋದ್ರೂ ಅನಾರೋಗ್ಯ ಶುರುವಾಗುತ್ತದೆ. ದೇಹದಲ್ಲಿ ಆಗುವ ಸಣ್ಣ ಗಾಯ ಕೂಡ ನೋವು ನೀಡುತ್ತದೆ. ಇನ್ನು ಮೂತ್ರಪಿಂಡದಲ್ಲಿ ಕಾಣಿಸುವ ಕಲ್ಲು ಯಮಯಾತನೆ ನೀಡುತ್ತದೆ.
ಮೂತ್ರಪಿಂಡದ ಕೆಲ ರಾಸಾಯನಿಕಗಳಿಂದಾಗಿ ಮೂತ್ರಪಿಂಡದಲ್ಲಿ ಕಲ್ಲು ಉತ್ಪತ್ತಿಯಾಗುತ್ತದೆ. ಇದು ಗಂಭೀರ ಸಮಸ್ಯೆಗಳಲ್ಲಿ ಒಂದು.
ಮೂತ್ರಪಿಂಡದಲ್ಲಿ ಸಣ್ಣ ಬದಲಾವಣೆಯಾದ್ರೂ ದೇಹದ ಇತರ ಅಂಗಗಳ ಮೇಲೆ ಅದು ಪರಿಣಾಮ ಬೀರುತ್ತದೆ. ಮೂತ್ರಪಿಂಡ ದೇಹದ ದ್ರವ ಮತ್ತು ರಾಸಾಯನಿಕ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ರಕ್ತವನ್ನು ಶುದ್ಧೀಕರಿಸಿ, ವಿಷಯುಕ್ತ ಪದಾರ್ಥವನ್ನು ಮೂತ್ರದ ಮೂಲಕ ಹೊರ ಹಾಕುತ್ತದೆ. ರಕ್ತದಲ್ಲಿನ ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಮಟ್ಟವನ್ನು ಮೂತ್ರಪಿಂಡ ನಿಯಂತ್ರಿಸುತ್ತದೆ. ಇಷ್ಟೆಲ್ಲ ಕೆಲಸ ಮಾಡುವ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಂಡರೆ ಸಮಸ್ಯೆಯಾಗುತ್ತದೆ.
ಮೂತ್ರಪಿಂಡದ ಕಲ್ಲು ಸಣ್ಣದಿದ್ದರೆ ಅದನ್ನು ನೀರು ಕುಡಿಯುವ ಮೂಲಕ ಹೊರ ಹಾಕಬಹುದು. ಹೆಚ್ಚು ದ್ರವ ಪದಾರ್ಥ ಹಾಗೂ ನೀರು ಇದಕ್ಕೆ ಔಷಧಿ. ವೈದ್ಯಕೀಯ ಚಿಕಿತ್ಸೆ ಕೂಡ ಪಡೆಯಬಹುದು. ಅಲ್ಲದೆ ಮನೆ ಮದ್ದಿನ ಮೂಲಕವೂ ಚಿಕಿತ್ಸೆ ಪಡೆಯಬಹುದು.
ತುಳಸಿ, ಮೂತ್ರಪಿಂಡದ ಕಲ್ಲಿಗೆ ಒಳ್ಳೆಯ ಮದ್ದು. ತುಳಸಿ ಯೂರಿಕ್ ಆಮ್ಲದ ಮಟ್ಟವನ್ನು ಸ್ಥಿರಗೊಳಿಸಿ, ಕಲ್ಲನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಗೋಧಿ ಹುಲ್ಲು ಕೂಡ ಒಳ್ಳೆಯದು. ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕಲ್ಲು ದೇಹದಿಂದ ಹೋರ ಹೋಗಲು ನೆರವಾಗುತ್ತದೆ.
ನಿಂಬೆಯಲ್ಲಿರುವ ಸಿಟ್ರೇಟ್, ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ನಿಂಬೆ, ಕ್ಯಾಲ್ಸಿಯಂ ಒಡೆಯಲು ಸಹಾಯ ಮಾಡುತ್ತದೆ.
ಆಲಿವ್ ಎಣ್ಣೆಯ ಸೇವನೆಯಿಂದಲೂ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಎಲ್ಲ ಮನೆ ಮದ್ದು ಸೇವನೆ ಮೊದಲು ಕಿಡ್ನಿ ಕಲ್ಲು ಎಷ್ಟು ದೊಡ್ಡದಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಸಣ್ಣ ಪ್ರಮಾಣದಲ್ಲಿದ್ದರೆ ಇವು ನೆರವಾಗುತ್ತವೆ. ದೊಡ್ಡ ಪ್ರಮಾಣದಲ್ಲಿದ್ದಾಗ ವೈದ್ಯರ ಭೇಟಿಯಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ.