ಮೂತ್ರಪಿಂಡ ರೋಗಿಯೊಬ್ಬರು ಡಯಾಲಿಸಿಸ್ ಮಾಡಿಸಿಕೊಳ್ಳುವ ಸಲುವಾಗಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ಹೋಗಿದ್ದು, ಈ ವೇಳೆ ವಿದ್ಯುತ್ ಕಡಿತಗೊಂಡಿದ್ದ ಕಾರಣ ಸಕಾಲಕ್ಕೆ ಅವರಿಗೆ ಡಯಾಲಿಸಿಸ್ ಆಗಿರಲಿಲ್ಲ. ಇದರ ಪರಿಣಾಮ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಿಜನೂರಿನ ಅಮ್ರೋಹ ಜಿಲ್ಲಾಸ್ಪತ್ರೆಗೆ ಬುಧವಾರದಂದು 40ವರ್ಷದ ಮೊಹಮದ್ ಅಮೀರ್ ಡಯಾಲಿಸಿಸ್ ಗೆಂದು ಬೆಳಿಗ್ಗೆ ಆರು ಮೂವತ್ತರ ಸುಮಾರಿಗೆ ಬಂದಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಕಾರಣ ಗಂಟೆಗಟ್ಟಲೆ ಅವರು ಕಾದು ನಿಂತಿದ್ದಾರೆ.
ಇಷ್ಟಾದರೂ ವಿದ್ಯುತ್ ಸಂಪರ್ಕ ಸರಿಹೋಗದ ಕಾರಣ ಹಾಗೆಯೇ ಮನೆಗೆ ಹಿಂದಿರುಗಿದ್ದು, ಆದರೆ ಅವರ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಕುಟುಂಬಸ್ಥರು ಮೊರಾದಾಬಾದ್ ನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.
ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಳ್ಳಲು ಡಯಾಲಿಸಿಸ್ ಘಟಕಕ್ಕೆ ನೀರು ನುಗ್ಗಿರುವುದೇ ಕಾರಣ ಎನ್ನಲಾಗಿದ್ದು, ಜನರೇಟರ್ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ರೋಗಿಯ ಪರಿಸ್ಥಿತಿ ಹದಗೆಟ್ಟಿತ್ತು ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕಿ ಡಾ. ಪ್ರೇಮಾಪಂತ್ ತ್ರಿಪಾಠಿ ಹೇಳಿದ್ದಾರೆ.