ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ವೀವ್ಸ್ ಮತ್ತು ಫಾಲೋವರ್ಸ್ ಪಡೆಯಲು ಗೆಳೆಯರ ಗುಂಪೊಂದು ಹಗಲಿನಲ್ಲಿ ನಾಟಕೀಯವಾಗಿ ಅಪಹರಣ ದೃಶ್ಯವನ್ನು ಸೃಷ್ಟಿಸಿರೋ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಜನನಿಬಿಡ ರಸ್ತೆಯಲ್ಲಿ ಕಾರಿಗೆ ವ್ಯಕ್ತಿಯೊಬ್ಬನನ್ನು ಅಪಹರಿಸಲು ತಳ್ಳುತ್ತಿರುವ ದೃಶ್ಯ ಇದಾಗಿದ್ದು ಇತರರು ನೋಡುತ್ತಾ ನಿಂತಿರುತ್ತಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಮೊದಲಿಗೆ ನಿಜವಾದ ಅಪಹರಣವನ್ನು ಚಿತ್ರಿಸುವಂತೆ ತೋರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಆದ ತಕ್ಷಣ ಪೊಲೀಸರು ವಿಡಿಯೋಗೆ ಸಂಬಂಧಿಸಿದಂತೆ ಅಜಿತ್, ದೀಪಕ್ ಮತ್ತು ಅಭಿಷೇಕ್ ಎಂಬ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆಪಾದಿತ ಅಪಹರಣವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಹಂಚಿಕೆಯಾಗಲು ಯೋಜಿಸಲಾದ ಒಂದು ಘಟನೆಯಾಗಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಸಹಾಯಕ ಉಪ ಪೊಲೀಸ್ ಕಮಿಷನರ್ (ADCP) ಮನೀಶ್ ಕುಮಾರ್ ಮಿಶ್ರಾ ಅವರು ಮೂವರ ಕ್ರಮಗಳನ್ನು ಖಂಡಿಸಿದರು. ಅವರು ತಮ್ಮ ಸ್ನೇಹಿತನ ಸುರಕ್ಷತೆಗೆ ಧಕ್ಕೆ ತಂದಿದ್ದು ಮಾತ್ರವಲ್ಲದೆ ಸಾರ್ವಜನಿಕರಲ್ಲಿ ಭಯವನ್ನು ಹುಟ್ಟುಹಾಕಿದರು. ಜನಜಂಗುಳಿಯ ಮಾರುಕಟ್ಟೆಯ ನೆಮ್ಮದಿಗೆ ಭಂಗ ತಂದಿದ್ದಾರೆ ಎಂದು ಹೇಳಿದ್ದಾರೆ.
ನಂತರ ಮೂವರು ಯುವಕರನ್ನು ಬಂಧನದಿಂದ ಮುಕ್ತಗೊಳಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ಲೈಕ್ಗಳನ್ನು ಪಡೆಯಲು ತಮ್ಮನ್ನು ತಾವು ಅಪಾಯಕ್ಕೆ ಸಿಲುಕಿಸಿಕೊಳ್ಳದಂತೆ ಸೂಚನೆಗಳನ್ನು ನೀಡಿದ್ದಾರೆ.