ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಮಹಿಳೆಯ ಮೇಲಿದ್ದ ವೈಯಕ್ತಿಕ ದ್ವೇಷದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ದೆಹಲಿಯ ಶಹಾದರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ಆರೋಪಿಗಳು ಮಹಿಳೆಯ ತಲೆಗೂದಲು ಕತ್ತರಿಸಿ, ಪಾದರಕ್ಷೆ ಮಾಲೆ ತೊಡಿಸಿ, ರಸ್ತೆಯಲ್ಲಿ ಓಡಾಡುವಂತೆ ಮಾಡಿದ ಆರೋಪಿಗಳು ವಿಕೃತಿ ಮೆರೆದು ಸಂಭ್ರಮಿಸಿದ್ದಾರೆ. ಅಲ್ಲದೇ ಸ್ಥಳೀಯರು ಸಹ ಇವರ ಕೃತ್ಯಕ್ಕೆ ಉತ್ತೇಜನ ನೀಡಿದ್ದರು ಎಂದು ವರದಿಯಾಗಿದೆ.
ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಒಂದು ಮಗುವಿದ್ದು, ಆಕೆಯನ್ನು ನೆರೆಯ ಯುವಕನೊಬ್ಬ ಹಿಂಬಾಲಿಸುತ್ತಿದ್ದನಂತೆ. ಆತ ನವೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ಆತ್ಮಹತ್ಯೆಗೆ ಮಹಿಳೆಯೇ ಕಾರಣ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಯ ಕುರಿತು ಮಹಿಳೆಯ ತಂಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಹಿಳೆಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ.
ವೈಯಕ್ತಿಕ ದ್ವೇಷದಿಂದ ಮಹಿಳೆಯ ಮೇಲೆ ಈ ದೌರ್ಜನ್ಯ ನಡೆದಿದೆ. ಎಫ್ಐಆರ್ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಮಹಿಳೆಯ ಕೌನ್ಸೆಲಿಂಗ್ ನಡೆಯುತ್ತಿದೆ. ಕ್ಷಿಪ್ರ ತನಿಖೆ ಮಾಡುತ್ತಿದ್ದೇವೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ದೆಹಲಿ ಮಹಿಳಾ ಆಯೋಗವು ಈ ಪ್ರಕರಣದ ಬಗ್ಗೆ ಗಮನಹರಿಸಿದ್ದು, ಪೊಲೀಸರಿಗೆ ನೋಟೀಸ್ ನೀಡಲಿದೆ ಎಂದು ವರದಿಯಾಗಿದೆ.