
ವಿಜಯಪುರ: ವಿಜಯಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಮಗು ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಸುಮಾರು 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಮಗು ಹಾಗೂ ಅಪಹರಣ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿದ್ದಾರೆ.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬಾಗಲಕೋಟೆ ಮೂಲದ ರಾಮೇಶ್ವರಿ ಪವಾರ ಅವರ ಒಂದು ವರ್ಷದ ಮಗು ಸಂದೀಪನನ್ನು ಶನಿವಾರ ಮಧ್ಯಾಹ್ನ ದೇವರಹಿಪ್ಪರಗಿಯ ರವಿ ಹರಿಜನ ಎಂಬಾತ ಅಪಹರಿಸಿ ಪರಾರಿಯಾಗಿದ್ದ. ರಾಮೇಶ್ವರಿ ಪವಾರ ಅವರು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯನ್ನು ನೋಡಲು ಬಂದಿದ್ದ ವೇಳೆ ಘಟನೆ ನಡೆದಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿ ಪತ್ತೆಯಾಗಿದ್ದಾನೆ. ಮಗುವನ್ನು ವಶಕ್ಕೆ ಪಡೆದು ತಾಯಿ ಮಡಿಲಿಗೆ ಒಪ್ಪಿಸಲಾಗಿದೆ. ಆರೋಪಿ ರವಿ ವಿಚಾರಣೆ ನಡೆಸಲಾಗಿದೆ.