ಉತ್ತರಪ್ರದೇಶದ ಶಾಮ್ಲಿಯಲ್ಲಿ ನಡೆದ ಸಭೆಯಲ್ಲಿ ಮುನ್ಸಿಪಲ್ ಕೌನ್ಸಿಲ್ ಸದಸ್ಯರು ಪರಸ್ಪರ ಹೊಡೆದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟ್ವಿಟರ್ ನಲ್ಲಿ “ಯಾವುದೇ ಅಭಿವೃದ್ಧಿ ಕೆಲಸ ಮಾಡದಿದ್ದಾಗ ಪರಿಶೀಲನಾ ಸಭೆಯಲ್ಲಿ ಇನ್ನೇನು ಆಗಬಹುದು ? ಅದಕ್ಕಾಗಿಯೇ ಶಾಮ್ಲಿಯಲ್ಲಿ ಕೌನ್ಸಿಲರ್‌ಗಳ ನಡುವೆ ದೈಹಿಕ ಹೊಡೆದಾಟ ನಡೆದವು. ಇದು ಬಿಜೆಪಿ ಆಡಳಿತದ ಪಾಠ : ನಿಮ್ಮ ಸ್ವಂತ ಭದ್ರತಾ ವ್ಯವಸ್ಥೆ ಏರ್ಪಡಿಸಿದ ನಂತರ ಪರಿಶೀಲನಾ ಸಭೆಗೆ ಬನ್ನಿ” ಎಂದು ವ್ಯಂಗ್ಯವಾಡುತ್ತಾ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದ್ದಾರೆ.
ಶಾಮ್ಲಿ ಪುರಸಭೆಯ ಆಡಳಿತ ಮಂಡಳಿ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಅರವಿಂದ ಸಂಗಲ್ ಮತ್ತು ಶಾಸಕ ಪ್ರಸನ್ನ ಚೌಧರಿ ಉಪಸ್ಥಿತರಿದ್ದರು. ಈ ವೇಳೆ ನಾಲ್ಕು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ನಡೆದ ಸಭೆಯು ಕೌನ್ಸಿಲ್‌ನ ಇಬ್ಬರು ಸದಸ್ಯರ ನಡುವೆ ತೀವ್ರ ವಾಗ್ವಾದ ಮತ್ತು ದೈಹಿಕ ಘರ್ಷಣೆಗೆ ತಿರುಗಿತು.
ಇಬ್ಬರು ಸದಸ್ಯರು ಪರಸ್ಪರ ಗುದ್ದಾಟ ನಡೆಸುವುದರೊಂದಿಗೆ ಆಡಳಿತ ಮಂಡಳಿ ಸಭೆಯು ಸಂಪೂರ್ಣ ಕುಸ್ತಿ ಅಖಾಡವಾಗಿ ಮಾರ್ಪಟ್ಟಿತು. ಪೊಲೀಸರು ಮತ್ತು ಹಿರಿಯ ಮುಖಂಡರ ಎದುರೇ ಇಡೀ ಘಟನೆ ನಡೆದಿದ್ದು ಹೊಡೆದಾಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.