
ನಾವು ಬಿಜೆಪಿ ಮೈತ್ರಿಯಿಂದ ಹೊರ ಬಂದಿದ್ದು, ಒದ್ದು ಹೊರ ಹಾಕಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಂಬೈನಲ್ಲಿ ಶನಿವಾರ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾವು 25 ವರ್ಷಗಳ ಕಾಲ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸಮಯ ಹಾಳು ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು 2019 ರ ಚುನಾವಣೆ ವೇಳೆ ಬಿಜೆಪಿಯೊಂದಿಗೆ ಮೈತ್ರಿಯನ್ನು ಮುರಿದುಕೊಳ್ಳುವ ಮೂಲಕ ಒದ್ದು ಹೊರ ಹಾಕಿದ್ದೇವೆ ಎಂದು ತಿರುಗೇಟು ನೀಡಿದರು.
ಜಮ್ಮು ಮತ್ತು ಕಾಶ್ಮೀರದ ತಹಸೀಲ್ ಕಚೇರಿಯಲ್ಲಿ ರಾಹುಲ್ ಭಟ್ ಅವರನ್ನು ಭಯೋತ್ಪಾದಕರು ಹತ್ಯೆ ಮಾಡಿದರಲ್ಲಾ, ನೀವು ಬಿಜೆಪಿಯವರು ಏನು ಮಾಡುತ್ತಿದ್ದಿರಿ ? ಆಗ ನೀವು ಹನುಮಾನ್ ಚಾಲೀಸಾವನ್ನು ಓದುತ್ತಿದ್ದೀರಾ ? ಎಂದು ಉದ್ಧವ್ ವಾಗ್ದಾಳಿ ನಡೆಸಿದರು.
ಕೆಲವು ನಕಲಿ ಹಿಂದುತ್ವವಾದಿಗಳು ನಮ್ಮ ದೇಶವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಬಾಳಾ ಸಾಹೇಬ್ ಠಾಕ್ರೆ ಅವರು, ದೇವಾಲಯಗಳಲ್ಲಿ ಘಂಟೆ ಬಾರಿಸುವ ಹಿಂದುಗಳು ನಮಗೆ ಬೇಡ. ಭಯೋತ್ಪಾದಕರನ್ನು ಮಟ್ಟ ಹಾಕುವಂತಹ ಹಿಂದುಗಳು ಬೇಕು ಎಂದು ಹೇಳಿದ್ದರು. ಹಾಗಾದರೆ, ನೀವು ಹಿಂದುತ್ವಕ್ಕಾಗಿ ಏನು ಮಾಡಿದ್ದೀರಿ ? ಎಂದು ಹೇಳಿ. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದು ನೀವಲ್ಲ, ನಮ್ಮ ಶಿವ ಸೈನಿಕರು. ನಮ್ಮ ನರನಾಡಿಗಳಲ್ಲಿ ಹರಿಯುತ್ತಿರುವುದು ಕೇಸರಿ ರಕ್ತ, ನಮಗೆ ನೀವು ಸವಾಲು ಹಾಕಲು ಪ್ರಯತ್ನಿಸಬೇಡಿ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.