ನೀವು ಸಾಮಾಜಿಕ ಮಾಧ್ಯಮದಲ್ಲಿ ಆ್ಯಕ್ಟೀವ್ ಆಗಿದ್ದರೆ ಅಮೆರಿಕದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಕರ್ದಾಶಿಯನ್ ರ ಬಗ್ಗೆ ನಿಮಗೆ ತಿಳಿದಿರಲೆಬೇಕು. ಅತಿರಂಜಿತ ಮತ್ತು ಎಲ್ಲರ ಕನಸಿನ ಜೀವನಶೈಲಿಯನ್ನು ಜೀವಿಸುತ್ತಿರುವ ಕರ್ದಾಶಿಯನ್ ಸಹೋದರಿಯರು ನಿಮಗೆ ಅಪರಿಚಿತರಲ್ಲ ಎಂದು ಭಾವಿಸಬಹುದು. ಆನ್‌ಲೈನ್‌ನಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇರುವ ಇವರ ಫ್ಯಾಷನ್ ಸೆನ್ಸ್ ಎಲ್ರಿಗೂ ಅಷ್ಟು ಇಷ್ಟವಾಗದಿದ್ರು ಇವರು ಧರಿಸಿದ ಬಟ್ಟೆಗಳನ್ನ ಧರಿಸೋಕೆ ಇವರ ಅಭಿಮಾನಿಗಳು ಕಾತರರಾಗಿರುತ್ತಾರೆ.
ಕರ್ದಾಶಿಯನ್ ಸಹೋದರಿಯರೆಂದೇ ಫೇಮಸ್ ಆಗಿರುವ ಕಿಮ್, ಕ್ಲೋಹಿ, ಕೌರ್ಟ್ನಿ, ಕೆಂಡಾಲ್ ಮತ್ತು ಕೈಲಿ 2019 ರಲ್ಲಿ, ಕರ್ದಾಶಿಯನ್ ಕ್ಲೋಸೆಟ್ ಅನ್ನು ಪ್ರಾರಂಭಿಸಿದರು. ಈ ವೆಬ್ಸೈಟ್ ನಲ್ಲಿ ಕರ್ದಾಶಿಯನ್ ಕುಟುಂಬದ ಸದಸ್ಯರು ಒಮ್ಮೆ ಧರಿಸಿದ ಅಥವಾ ಬಳಸಿದ ಬಟ್ಟೆಗಳು, ಬೂಟುಗಳು ಮತ್ತು ಪರಿಕರಗಳನ್ನು ಮಾರಾಟ ಮಾಡಲಾಗುತ್ತದೆ. ಈಗ ಈ ವಿಚಾರವೇ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ.
ಕ್ಲೋಹಿ ಕರ್ದಾಶಿಯನ್ ತನ್ನ ಮಗಳು ಒಂದು ಬಾರಿ ಧರಿಸಿದ ಬಟ್ಟೆಗಳನ್ನ ಈ ವೆಬ್ಸೈಟ್ ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಈ ಲಿಂಕ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಟ್ವಿಟ್ಟರ್ ಬಳಕೆದಾರರು, ಕ್ಲೋಹಿ ಆ ಬಟ್ಟೆಗಳನ್ನ ಖರೀದಿಸಿದಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತಕ್ಕೆ ಮಾರಾಕ್ಕಿಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕ್ಲೋಹಿ ಮಗಳು ಧರಿಸಿದ್ದ ಉಡುಪಿನ ಮೂಲತಃ ಬೆಲೆ 6.99 ಡಾಲರ್ ಆದರೆ ಕರ್ದಾಶಿಯನ್ ಕ್ಲೋಸೆಟ್ನಲ್ಲಿ ಇದೇ ಉಡುಪನ್ನ 20 ಡಾಲರ್ ಗಳಿಗೆ ಮಾರಾಟ ಮಾಡಲಾಗುತ್ತಿದೆ. ಕೆಲವು ನೆಟ್ಟಿಗರು ಇದು ಅವರವರ ಆಯ್ಕೆ, ಬೇಕಾದವರು ತೆಗೆದುಕೊಳ್ಳಬಹುದು ಎಂದಿದ್ದಾರೆ. ಆದರೆ ಭಾಗಶಃ ಯೂಸರ್ಸ್ ಇದು ಹಗಲು ದರೋಡೆ, ಇಂತಾ ಸೆಲೆಬ್ರೆಟಿಗಳು ತಮಗಿರುವ ಅಭಿಮಾನಿಗಳನ್ನ ಹೀಗೆ ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.