ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಹಿರಿಮೆಗೆ ಮತ್ತೊಂದು ಗರಿ ಮೂಡಿಸಲಿರುವ ಮಹತ್ವಾಕಾಂಕ್ಷಿಯ ನಾಲೆಡ್ಜ್ ಹೆಲ್ತ್ ಇನ್ನೋವೇಷನ್ ರೀಸರ್ಚ್ ಸಿಟಿ(KHIR) ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ. 26ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿವಿಧ ದೇಶಗಳ ಗಣ್ಯ ಉದ್ಯಮಿಗಳು, ಶಿಕ್ಷಣ ತಜ್ಞರು, ಸಂಶೋಧಕರು, ವೈದ್ಯಕೀಯ ಕ್ಷೇತ್ರದ ಸಾಧಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಒಟ್ಟು 2 ಸಾವಿರ ಎಕರೆ ವಿಸ್ತೀರ್ಣದಲ್ಲಿ ಕೆಹೆಚ್ಐಆರ್ ಸಿಟಿ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ 500 ಎಕರೆಯಲ್ಲಿ ಸಿಟಿ ನಿರ್ಮಿಸಲಿದ್ದು, 40,000 ಕೋಟಿ ರೂ. ಹೂಡಿಕೆಯ ಈ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.
ಸಿಂಗಾಪುರದ ಬಯೋ ಪೋಲಿಸ್, ರೀಸರ್ಜ್ ಟ್ರ್ಯಾಂಗಲ್ ಪಾರ್ಕ್, ಸೈನ್ಸ್ ಪಾರ್ಕ್, ಕೆಬಿಐಸಿ, ಅಮೆರಿಕದ ಬೋಸ್ಟನ್ ಇನ್ನೋವೇಶನ್ ಕ್ಲಸ್ಟರ್ ಇದಕ್ಕೆ ಮಾದರಿಯಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾದ ಹೈಟೆಕ್ ಸಿಟಿ, ಎಲೆಕ್ಟ್ರಾನಿಕ್ ಸಿಟಿಯ ಮಾನದಂಡಗಳನ್ನು ಕೂಡ ಇಟ್ಟುಕೊಳ್ಳಲಾಗಿದೆ. ದೊಡ್ಡಬಳ್ಳಾಪುರ- ದಾಬಸ್ ಪೇಟೆಯ ನಡುವೆ ಕೆಹೆಚ್ಐಆರ್ ಸಿಟಿ ನಿರ್ಮಾಣವಾಗಲಿದ್ದು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ಕಿಲೋಮೀಟರ್ ದೂರದಲ್ಲಿದೆ.