ಕಲಬುರಗಿ: ಕಳೆದ ಲೋಕಸಭೆ ಚುನಾವಣೆ ಸೋಲಿನಿಂದ ನೊಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಭಾವುಕ ಮಾತುಗಳನ್ನಾಡುವ ಮೂಲಕ ಮತದಾರರ ಮನ ಗೆಲ್ಲಲು ಪ್ರಯತ್ನಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಮತ್ತು ರಾಜ್ಯದ ಅಭಿವೃದ್ಧಿಗೆ ನಾವು ಮಾಡಿರುವ ಕೆಲಸ ಸ್ಮರಿಸಿ ಮತ ಹಾಕಿ ಇಲ್ಲದಿದ್ದರೆ ನನಗೆ ಇಲ್ಲಿ ಯಾವುದೇ ಸ್ಥಾನ ಇಲ್ಲದಂತಾಗುತ್ತದೆ. ಅಂದರೆ ನಿಮ್ಮ ಹೃದಯ ಗೆಲ್ಲಲು ನನಗೆ ಸಾಧ್ಯವಾಗಿಲ್ಲ ಎಂದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮತ ಸಿಗಲಿ ಅಥವಾ ಸಿಗದೇ ಇರಲಿ ಕರ್ನಾಟಕ ಮತ್ತು ಕಲಬುರಗಿಗಾಗಿ ನಾವು ಮಾಡಿರುವ ಅಭಿವೃದ್ಧಿ ಕೆಲಸ ನೆನಪಿನಲ್ಲಿ ಇಟ್ಟುಕೊಂಡು ಕನಿಷ್ಠ ಪಕ್ಷ ನಾನು ಸತ್ತಾಗ ಮಣ್ಣು ಹಾಕಲಾದರೂ ಬನ್ನಿ. ಮಣ್ಣಿಗೆ ಹೆಚ್ಚು ಜನ ಬಂದರೆ ಒಳ್ಳೆಯ ಕೆಲಸ ಮಾಡಿದ್ದಾರೆ ಅದಕ್ಕೆ ಹೆಚ್ಚು ಜನ ಬಂದಿದ್ದಾರೆ ಎಂದು ಮಾತನಾಡುತ್ತಾರೆ. ನನ್ನನ್ನು ಸುಟ್ಟರೆ ಮೇಣದ ಬತ್ತಿ ಹಚ್ಚಲು ಬನ್ನಿ. ಇದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳುವುದಿಲ್ಲ ಎಂದು ಭಾವುಕರಾಗಿ ಹೇಳಿದ್ದಾರೆ.
ನಾನು ರಾಜಕೀಯದಿಂದ ಎಂದಿಗೂ ನಿವೃತ್ತನಾಗುವುದಿಲ್ಲ ಎಂದು ಘೋಷಿಸಿದ ಖರ್ಗೆ ನಾನು ಚುನಾವಣೆಗೆ ನಿಲ್ಲುತ್ತೇನೋ ಬಿಡುತ್ತೇನೋ ಆ ಮಾತು ಬೇರೆ. ಆದರೆ, ತುಳಿತಕ್ಕೆ ಒಳಗಾದ ಸಮಾಜದ ಪರವಾದ ಹೋರಾಟ ಮಾಡಲು ನಾನು ರಾಜಕೀಯದಲ್ಲಿ ಇರುತ್ತೇನೆ. ಕಾಂಗ್ರೆಸ್ ತತ್ವಗಳನ್ನು ಜೀವಂತವಾಗಿ ಇಡಲು, ಆರ್.ಎಸ್.ಎಸ್. ಸಿದ್ದಾಂತಗಳನ್ನು ಸೋಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ ಎಂದು ಘೋಷಿಸಿದ್ದಾರೆ.