ಹಾಸನ: ಅಂಬೇಡ್ಕರ್ ಗೆ ಅವಮಾನ ಮಾಡಿ ಅವರ ಹೆಸರಿನಲ್ಲಿಯೇ ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ನವರು 91 ಬಾರಿ ಅವಮಾನ ಮಾಡಿದ್ದಾರೆ ಎಂದು ಮೋದಿ ಹೇಳಿಕೆ ಪ್ರಸ್ತಾಪಿಸಿ ಪ್ರಧಾನಿ ಮೋದಿ ಎಲ್ಲವನ್ನು ಎಣಿಸಿಕೊಂಡಿರಬೇಕು ಎಂದು ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ದಲಿತರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗಾಂಧಿ ಕುಟುಂಬ, ನೆಹರುಗೆ ಇವರು ಎಷ್ಟು ಬಾರಿ ಬೈದಿದ್ದಾರೆ ಅನ್ನುವುದನ್ನು ಮೋದಿ ಹೇಳಲಿ ಎಂದು ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅವಮಾನಿಸಿತ್ತು ಎಂಬ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ಅಂಬೇಡ್ಕರ್ ಬಗ್ಗೆ ಓದಿ ತಿಳಿದುಕೊಳ್ಳಿ. ಅಂಬೇಡ್ಕರ್ ಮಾಡಿದ ಕಾನೂನು ಪಾಲಿಸುತ್ತಿದ್ದೀರಿ. ಅಂಬೇಡ್ಕರ್ ಸಂವಿಧಾನ ಬರೆಯಲು ಅವಕಾಶ ನೀಡಿದ್ವಿ. ಆಗ ಮೋದಿ ಕಡೆಯವರು ಇದ್ರಾ, ಆರ್.ಎಸ್.ಎಸ್.ನವರು ಇದ್ರಾ ಎಂದು ಪ್ರಶ್ನಿಸಿದ್ದಾರೆ.
ನಾವು ಭಾರತ್ ಜೋಡೋ ಎಂದು ಹೇಳುತ್ತೇವೆ. ನೀವು ಸಮಾಜ್ ತೋಡೋ ಅನ್ನುತ್ತೀರಿ. ಬಿಜೆಪಿಯವರು ಸಂವಿಧಾನ ವಿರೋಧಿಗಳು. ನೀವು ನಮಗೆ ಪಾಠ ಹೇಳುತ್ತೀರಾ? ಡಬಲ್ ಇಂಜಿನ್ ಸರ್ಕಾರ ಎಲ್ಲಿದೆ? ಅದರಲ್ಲಿ ಒಂದು ಇಂಜಿನ್ ಫೇಲ್ ಆಗಿದೆ ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.