ಚಂಡೀಗಢ: ಪಂಜಾಬ್ ನಲ್ಲಿ ಕನಿಷ್ಠ 10 ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಆರೋಪಿತನಾಗಿದ್ದ ಗ್ಯಾಂಗ್ ಸ್ಟರ್ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಪಾಕಿಸ್ತಾನದ ಲಾಹೋರ್ ನ ಮಿಲಿಟರಿ ಆಸ್ಪತ್ರೆಯಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ.
ಡ್ರಗ್ ಓವರ್ ಡೋಸ್ ನಿಂದ ಸಾವನ್ನಪ್ಪಿದ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಮೃತಪಟ್ಟಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ರಿಂಡಾ ಬಂಧನದ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ದರೋಡೆಕೋರ, ಡ್ರಗ್ ಸ್ಮಗ್ಲರ್ ಮತ್ತು ಶಸ್ತ್ರಾಸ್ತ್ರ ಪೂರೈಕೆದಾರ ಪಟ್ಟಿಯಲ್ಲಿರುವ ರಿಂಡಾ ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ. 35 ವರ್ಷ ವಯಸ್ಸಿನ ರಿಂಡಾ ಪಾಕಿಸ್ತಾನದ ವಾಧವಾ ಸಿಂಗ್ ಗುಂಪಿನೊಂದಿಗೆ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಂಡಿದ್ದ. ನವೆಂಬರ್ 14 ರಂದು ರಿಂಡಾನನ್ನು ಲಾಹೋರ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ದರೋಡೆಕೋರರು ಮತ್ತು ಪಾಕಿಸ್ತಾನಿ ಮೂಲದ ಭಯೋತ್ಪಾದಕ ಗುಂಪುಗಳ ನಡುವಿನ ಪ್ರಮುಖ ಕೊಂಡಿಯಾಗಿದ್ದ ಹರ್ವಿಂದರ್ ಸಿಂಗ್ ರಿಂಡಾ ಹರ್ ಪ್ರೀತ್ ಸಿಂಗ್ ಹತ್ಯೆಯ ನಂತರ ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಯ ಆಡಳಿತ ವಹಿಸಿಕೊಂಡಿದ್ದ. ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ.
ಮೇ ತಿಂಗಳಲ್ಲಿ ಪಂಜಾಬ್ ಪೊಲೀಸ್ ಇಂಟೆಲಿಜೆನ್ಸ್ ಹೆಡ್‌ಕ್ವಾರ್ಟರ್ಸ್ ಮೇಲೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್(ಆರ್‌ಪಿಜಿ) ದಾಳಿ ಮತ್ತು ಲುಧಿಯಾನ ಕೋರ್ಟ್ ಸ್ಫೋಟದಲ್ಲಿ ಈತ ಮಾಸ್ಟರ್‌ಮೈಂಡ್ ಎಂದು ಹೇಳಲಾಗಿದೆ. ಖ್ಯಾತ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆ ಪ್ರಕರಣದಲ್ಲೂ ಈತನ ಅವರ ಹೆಸರು ಕೇಳಿಬಂದಿತ್ತು. ವಿವಿಧ ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಿಂಡಾ ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ ನ್ಯಾಶನಲ್ ನ ಸದಸ್ಯನಾಗಿದ್ದ.