ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಪಡಿತರದಲ್ಲಿ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಡಿದ ಭರವಸೆಯಂತೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದು ಖಚಿತವಾಗಿದ್ದು, ಯಾವಾಗ ನೀಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಲಿದ್ದಾರೆ ಎಂದು ಹೇಳಿದ್ದಾರೆ.
10 ಕೆಜಿ ಉಚಿತವಾಗಿ ನೀಡುವ ಕುರಿತಾಗಿ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಇದರಿಂದ ಹೆಚ್ಚುವರಿ ಆರ್ಥಿಕ ಹೊರೆ ಆಗಲಿದ್ದು ಇದನ್ನ ಹೇಗೆ ಸರಿದೂಗಿಸಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಬಳಿ ಮೊದಲು ಅಕ್ಕಿ ಕೇಳುತ್ತೇವೆ. ಪ್ರಸ್ತುತ ನೀಡುತ್ತಿರುವ ದರದಲ್ಲಿ ಅಕ್ಕಿ ನೀಡಲು ಮನವಿ ಮಾಡಲಿದ್ದು ಕೇಂದ್ರ ಸರ್ಕಾರಕ್ಕೆ ನೀಡದಿದ್ದರೆ ಟೆಂಡರ್ ಕರೆದು ಖರೀದಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡಲಿದೆ ಎಂಬ ವಿಶ್ವಾಸವಿದೆ. ಪ್ರತಿ ಕೆಜಿಗೆ 34 ರೂಪಾಯಿ ವೆಚ್ಚವಾಗಲಿದ್ದು, ಸಾರಿಗೆಗೆ 2.70 ರೂ. ಬೇಕಾಗುತ್ತದೆ. ಪ್ರತಿ ತಿಂಗಳು ಅಕ್ಕಿ ಖರೀದಿಸಲು 742 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಹೇಳಿದ್ದಾರೆ.