ಬೆಂಗಳೂರು: 5 ಕೆಜಿ ಹೆಚ್ಚುವರಿ ಅಕ್ಕಿ ವಿತರಿಸುವವರೆಗೂ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಬಳಿ ಮಾತನಾಡಿದ ಸಚಿವರು, ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಕಡೆ ಅಕ್ಕಿ ಬೇಕು ಎನ್ನುತ್ತಿದ್ದು, ಮತ್ತೆ ಕೆಲವು ಕಡೆ ಹಣ ಬೇಕು ಎಂದು ಕೇಳುತ್ತಿದ್ದಾರೆ. ರಾಜ್ಯದಲ್ಲಿ ಶೇಕಡ 70ರಿಂದ 80ರಷ್ಟು ಜನ ಅಕ್ಕಿ ಬೇಕು ಎಂದು ಹೇಳುತ್ತಿದ್ದಾರೆ. ಹೀಗಾಗಿ ಅಕ್ಕಿ ಕೊಡಬೇಕು ಎಂದುಕೊಂಡಿದ್ದೇವೆ. ಆದಷ್ಟು ಬೇಗನೆ ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ತೆಲಂಗಾಣ, ಆಂಧ್ರಪ್ರದೇಶ ಸೇರಿ ಹಲವೆಡೆಯಿಂದ ಅಕ್ಕಿ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ಬೆಲೆ ನಿಗದಿ ಆಗುತ್ತಿಲ್ಲ. ಈ ಸಲ ಉತ್ಪಾದನೆ ಕಡಿಮೆ ಆಗುತ್ತಿದೆ. ಆದಷ್ಟು ಬೇಗ ಅಕ್ಕಿ ಕೊಡುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಅಲ್ಲಿಯವರೆಗೆ ನಾವು ಹೇಳಿದಂತೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.