ವಿಶಾಖಪಟ್ಟಣಂ: ವಿದ್ಯಾರ್ಥಿನಿಯರು ತಡವಾಗಿ ಶಾಲೆಗೆ ಬಂದಿದ್ದಕ್ಕೆ ಪ್ರಾಂಶುಪಾಲರಿಬ್ಬರು ಶಿಕ್ಷೆ ಹೆಸರಲ್ಲಿ 15 ವಿದ್ಯಾರ್ಥಿನಿಯರ ಕೂಡಲು ಕತ್ತರಿಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕೆಜಿಬಿವಿ ಶಾಲೆಯಲ್ಲಿ ನಡೆದಿದೆ.
ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಜಿ ಮಡುಗುಳ ಮಂಡಲದ ಜಿಎಂ ಕೊತ್ತೂರು ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಪ್ರಾಂಶುಪಾಲರು (ವಿಶೇಷ ಅಧಿಕಾರಿ) ತಡವಾಗಿ ಬಂದಿದ್ದಕ್ಕೆ ಶಿಕ್ಷೆಯಾಗಿ ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ್ದಾರೆ.
ಪ್ರಾಂಶುಪಾಲರ ಕ್ರಮಕ್ಕೆ ಪೋಷಕರು ಮತ್ತು ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ತಿಕ ಪೌರ್ಣಮಿಯಂದು ಶಾಲೆಯ ಪ್ರಾರ್ಥನಾ ಅವಧಿಗೆ 15 ವಿದ್ಯಾರ್ಥಿಗಳು ತಡವಾಗಿ ಬಂದಿದ್ದಾರಂತೆ ಇದಕ್ಕೆ ಶಿಕ್ಷೆಯಾಗಿ, ಪ್ರಾಂಶುಪಾಲ ಸಾಯಿ ಪ್ರಸನ್ನ ಎಂಬುವವರು ಪ್ರಾರ್ಥನೆಯ ಸಮಯದಲ್ಲಿ ತಡವಾಗಿ ಬಂದಿದ್ದಕ್ಕೆ ಬೈದಿದ್ದಾರೆ. ಅಲ್ಲದೇ ಶಿಕ್ಷೆ ಎಂದು ವಿದ್ಯಾರ್ಥಿನಿಯರ ಕೂದಲನ್ನು ಟ್ರಿಮ್ ಮಾಡಿದ್ದಾರೆ. ವಿದ್ಯಾರ್ಥಿನಿಯರು ಹಾಗೆಮಾಡದಂತೆ ಕೇಳಿಕೊಂಡರೂ ಪ್ರಾಂಶುಪಾಲರು ಬಿಟ್ಟಿಲ್ಲ. ಎಲ್ಲರ ಕೂದಲು ಕತ್ತರಿಸಿದ್ದಾರೆ.
ಅಲ್ಲದೇ ಈ ಬಗ್ಗೆ ಬಹಿರಂಗಪಡಿಸದಂತೆ ಪ್ರಾಂಶುಪಾಲರು ಬೆದರಿಕೆ ಕೂದ ಹಾಕಿದ್ದಾರೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಪ್ರಾಂಶುಪಾಲರ ಕ್ರಮ ಅವಮಾನಕರ ಮತ್ತು ಅನುಚಿತವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹಾಸ್ಟೆಲ್‌ನಲ್ಲಿ ಸರಿಯಾದ ನೀರು ಸರಬರಾಜು ಇಲ್ಲದಿರುವುದೇ ವಿದ್ಯಾರ್ಥಿಗಳ ವಿಳಂಬಕ್ಕೆ ಕಾರಣ ಎಂದು ಹಲವರು ತಿಳಿಸಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಾಡೇರು ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆ (ಐಟಿಡಿಎ) ಯೋಜನಾಧಿಕಾರಿ ವಿ ಅಭಿಷೇಕ್, ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ ಮತ್ತು ಪತ್ತೆಯಾದ ಆಧಾರದ ಮೇಲೆ ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆಂಧ್ರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎಪಿ ಎಸ್‌ಸಿಪಿಸಿಆರ್) ಕೂಡ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಶಿಸ್ತಿನ ನೆಪದಲ್ಲಿ ನಡೆಯುವ ಇಂತಹ ಕೃತ್ಯಗಳು ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ಆಗಬಾರದು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೇಸಲಿ ಅಪ್ಪಾರಾವ್ ತಿಳಿಸಿದ್ದಾರೆ. ಸದಸ್ಯ ಗೊಂಡು ಸೀತಾರಾಂ ಕೂಡ ಇಂತಹ ಶಿಕ್ಷೆಯನ್ನು ಖಂಡಿಸಿದ್ದಾರೆ.