
ಕಾರವಾರ: ರಾಜ್ಯದಲ್ಲಿ ಕೊರೊನಾ ಸೋಂಕು, ರೂಪಾಂತರ ವೈರಸ್ ಬಳಿಕ ಇದೀಗ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿವೆ. ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯಿಂದ ಯುವತಿ ಬಲಿಯಾದ ಪ್ರಕರಣದ ಬೆನ್ನಲ್ಲೇ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಂಗನ ಕಾಯಿಲೆ ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 40 ವರ್ಷದ ವ್ಯಕ್ತಿಯಲ್ಲಿ ಕೆ ಎಫ್ ಡಿ ಸೋಂಕು ಪತ್ತೆಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷಿಸಿದಾಗ ವ್ಯಕ್ತಿಯಲ್ಲಿ ಕೆ ಎಫ್ ಡಿ ಸೋಂಕು ದೃಢಪಟ್ಟಿದೆ.
ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಸಿದ್ದಾಪುರ ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇತ್ತೀಚೆಗೆ ಶಿವಮೊಗ್ಗದ ಹೊಸನಗರ ತಾಲೂಕಿನ ಗ್ರಾಮವೊಂದರಲ್ಲಿ 18 ವರ್ಷದ ಯುವತಿ ಮಂಗನ ಕಾಯಿಲೆಗೆ ಬಲಿಯಾಗಿದ್ದಳು.