ಹುಟ್ಟಿದ ಕೆಲ ದಿನಗಳಲ್ಲೇ ದೂರವಾದ, ತಮ್ಮ ಒಂದು ವರ್ಷದ ಗಂಡು ಮಗುವನ್ನು ಪಡೆಯಲು ಹಲವಾರು ಅಡೆತಡೆಗಳನ್ನು ಎದುರಿಸಿ ವಾರಗಳ ನಂತರ, ಕೇರಳದ ಅನುಪಮಾ ಮತ್ತು ಅಜಿತ್ ಶುಕ್ರವಾರ ಔಪಚಾರಿಕವಾಗಿ ವಿವಾಹವಾಗಿದ್ದಾರೆ.
ಇವರ ಮದುವೆಯನ್ನ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕೃತಗೊಳಿಸಲಾಗಿದೆ. ನಾವು ಕೆಲವು ವಾರಗಳ ಹಿಂದೆ ಕಾನೂನುಬದ್ಧವಾಗಿ ಮದುವೆಯಾಗಲು ನಮ್ಮ ದಾಖಲೆಗಳನ್ನು ಸಲ್ಲಿಸಿದ್ದೆವು, 2021 ರ ಕೊನೆಯ ದಿನದಂದು ನಮ್ಮನ್ನು ಬರಲು ಕೇಳಲಾಯಿತು. ನಾವು ಈಗ ನಿಜವಾಗಿಯೂ ಸಂತೋಷವಾಗಿದ್ದೇವೆ ಮತ್ತು ಈ ದಿನ ಕಾನೂನುಬದ್ಧವಾಗಿ ನಮ್ಮ ಮಗನ ಸಮ್ಮುಖದಲ್ಲಿ ನಾವಿಬ್ಬರು ಪತಿ-ಪತ್ನಿಯಾಗಿರುವುದು ಇನ್ನೂ ಸಂತೋಷವಾಗಿದೆ ಎಂದು ಅನುಪಮಾ ಮಾಧ್ಯಮದ ಮುಂದೆ ಹೇಳಿದ್ದಾರೆ.
ಅಕ್ಟೋಬರ್, 2020 ರಲ್ಲಿ ಅವರು ತಮ್ಮ ಗಂಡು ಮಗುವಿಗೆ ಜನ್ಮ ನೀಡಿದ ನಾಲ್ಕು ದಿನಗಳ ನಂತರ, ಅನುಪಮಾ ಅವರ ಪೋಷಕರು ಅದನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದರು. ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ (KSCCWC) ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಬೆಂಬಲದಿಂದ
ಮಗುವನ್ನು ಆಂಧ್ರಪ್ರದೇಶದ ದಂಪತಿಗಳಿಗೆ ದತ್ತು ನೀಡಿದ್ದಾರೆ.
ಆದರೆ ಛಲ ಬಿಡದ ಅನುಪಮಾ, ನನ್ನ ಮಗುವನ್ನ ನನ್ನಿಂದ ಬಲವಂತವಾಗಿ ಕಸಿದುಕೊಳ್ಳಲಾಗಿದೆ. ನಾನು ನನ್ನ ಸಿಸೇರಿಯನ್ ಆಪರೇಷನ್ನಿಂದ ಚೇತರಿಸಿಕೊಳ್ಳುತ್ತಿದ್ದೆ, ಈ ವೇಳೆ ನನ್ನ ನಾಲ್ಕು ದಿನದ ಮಗನನ್ನ ಬಲವಂತವಾಗಿ ಕಸಿದುಕೊಂಡಿದ್ದಾರೆ. ಇದರ ಹಿಂದೆ ತಂದೆ-ತಾಯಿ ಮತ್ತು ತನ್ನ ತಂದೆಗೆ ತಿಳಿದಿರುವ ನಾಲ್ವರ ಕೈವಾಡವಿದೆ ಎಂದು ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅಡಿಯಲ್ಲಿ ಮನವಿ ಮಾಡಿದ್ದರು.
ಮಗುವನ್ನು ಕಳೆದುಕೊಂಡು ದಿಗ್ಭ್ರಮೆಗೊಂಡ ಅನುಪಮಾರ ಮನವಿಯ ಮೇಲೆ ಕ್ರಮ ಪ್ರಾರಂಭವಾಯಿತು. ಸೆಪ್ಟೆಂಬರ್ ನಲ್ಲಿ ಶುರುವಾದ ಈ ಹೋರಾಟ ಕೆಲ ವಾರಗಳ ಹಿಂದೆ ಅಂತ್ಯಗೊಂಡಿದೆ. ಮಗುವನ್ನ ಹುಡುಕಿಸಿ ಡಿಎನ್ಎ ಪರೀಕ್ಷೆ ನಡೆಸಲಾಯ್ತು. ಆನಂತರ ಅನುಪಮಾ ಮತ್ತು ಅಜಿತ್ ಈ ಮಗುವಿನ ತಂದೆ-ತಾಯಿ ಎಂದು ದೃಢವಾದ ಮೇಲೆ ಮಗುವನ್ನ ಇವರಿಗೆ ಒಪ್ಪಿಸಲಾಯ್ತು.