ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ಮಹಿಳೆಯೊಬ್ಬರು ತರಿಸಿಕೊಂಡಿದ್ದ ಆಹಾರ ಪಾರ್ಸೆಲ್‌ನಲ್ಲಿ ಹಾವಿನ ಚರ್ಮವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.
ಮೇ 5 ರಂದು ಪ್ರಿಯಾ ಎಂಬ ಗ್ರಾಹಕರು ಚಂತಮುಕ್ಕಿನ ಶಾಲಿಮಾರ್ ಹೋಟೆಲ್ ನಲ್ಲಿ ಪರೋಟಾ ಆರ್ಡರ್ ಮಾಡಿದ್ದರು. ಆಹಾರದ ಪೊಟ್ಟಣವನ್ನು ಬಿಚ್ಚಿದಾಗ ಪ್ಯಾಕೇಟ್ ನೊಳಗೆ ಅರ್ಧ ಬೆರಳಿನ ಉದ್ದದ ಹಾವಿನ ಚರ್ಮ ಕಂಡು ಬಂದಿದೆ. ಇದನ್ನು ಕಂಡು ಆಕೆ ಆಘಾತಕ್ಕೊಳಗಾಗಿದ್ದಾಳೆ.
ತಕ್ಷಣ ಕುಟುಂಬಸ್ಥರು ದೂರು ನೀಡಿದ್ದು, ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ರೆಸ್ಟೋರೆಂಟ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿರುವನಂತಪುರಂನ ಆಹಾರ ಸುರಕ್ಷತೆಯ ಸಹಾಯಕ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
ತುಷಾರ್ ಕಾಂತ್ ನಾಯಕ್ ಎಂಬ ಟ್ವಿಟರ್ ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ. ಉಳಿದ ಆಹಾರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆಹಾರ ಸುರಕ್ಷತಾ ಇಲಾಖೆಯು ಆಹಾರ ಪದಾರ್ಥಗಳನ್ನು ಸುತ್ತಲು ಪತ್ರಿಕೆಗಳನ್ನು ಬಳಸುವುದನ್ನು ಈ ಹಿಂದೆ ನಿಷೇಧಿಸಿತ್ತು.