ತಾಯಿ ದೇವರ ಸಮಾನ ಅಂತಾರೆ. ಆದರೆ ಕೇರಳದಲ್ಲಿ ಮಾತ್ರ ಈ ಮಾತನ್ನು ಸುಳ್ಳು ಮಾಡುವಂತಹ ಘಟನೆಯೊಂದು ನಡೆದಿದೆ. ಮಗು ಅಳೋದನ್ನು ಸಹಿಸಲು ಸಾಧ್ಯವಾಗದೇ ಹೆತ್ತ ತಾಯಿ ನನ್ನ 27 ದಿನಗಳ ಕಂದಮ್ಮನನ್ನು ಗೋಡೆಗೆ ಜಜ್ಜಿ ಕೊಲೆ ಮಾಡಿದ ಶಾಕಿಂಗ್ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಆಶ್ರಮವೊಂದರಲ್ಲಿ ತನ್ನ ಪ್ರಿಯಕರನೊಂದಿಗೆ ವಾಸವಿದ್ದ ಮಹಿಳೆಯು 27 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಮಗು ಅವಧಿಗೂ ಮುನ್ನವೇ ಜನಿಸಿದ್ದರಿಂದ ಅನಾರೋಗ್ಯದಿಂದ ಬಳಲುತ್ತಿತ್ತು ಎನ್ನಲಾಗಿದೆ.
ಪ್ರಿಯಕರನಿಗೆ ಬೇರೆ ವಿವಾಹವಾಗಿದೆ ಎಂಬುದು ತಿಳಿದಿದ್ದರೂ ಸಹ ಈಕೆ ಆತನೊಂದಿಗೆ ಆಶ್ರಮದಲ್ಲಿ ಅಡುಗೆ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಳು ಎನ್ನಲಾಗಿದೆ. ಮಗುವಿನ ಆರೋಗ್ಯ ವಿಪರೀತ ಹದಗೆಟ್ಟಿದ್ದರಿಂದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಔಷಧಿ ನೀಡಿದ್ದಾರೆ.
ಆದರೆ ಮಾರನೇ ದಿನ ಮಗುವಿನ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲಿ ವೈದ್ಯರು ಮಗು ಸತ್ತಿದೆ ಎಂದು ಘೋಷಣೆ ಮಾಡಿದ್ದರು. ಆದರೆ ಇದರಿಂದ ಅನುಮಾನಗೊಂಡ ಆಶ್ರಮದ ಫಾದರ್ ಒಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆಯಲ್ಲಿ ತಲೆಬುರುಡೆಗೆ ಗಾಯವಾಗಿರುವುದು ತಿಳಿದು ಬಂದಿದೆ. ಜೋಡಿಯನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಮಗುವಿನ ಅನಾರೋಗ್ಯ ಮುಂದೆ ತನ್ನ ಭವಿಷ್ಯಕ್ಕೆ ಮಾರಕವಾಗಬಹುದೆಂಬ ಭಯದಲ್ಲಿ ತಾನು ಕೊಲೆ ಮಾಡಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ.