ಚಾಮರಾಜನಗರ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸರಣಿ ಭೂ ಕುಸಿತ ಸಂಭವಿಸಿದ್ದು, ಈವರೆಗೆ 84 ಜನರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನೂರಾರು ಕುಟುಂಬಗಳೇ ಕಣ್ಮರೆಯಾಗಿವೆ.
ವಯನಾಡ್ ನ ಮೆಪ್ಪಾಡಿ, ಮುಂಡಕೈ, ಚೂರಲ್ ಮಲ ಗ್ರಾಮಗಳಲ್ಲಿ ಸಾಲು ಸಾಲು ಭೂ ಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈವರೆಗೆ 84 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. 30 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಘಟನಾ ಸ್ಥಳಗಳಲ್ಲಿ ಅಗ್ನಿಶಾಮ ಸಿಬ್ಬಂದಿ ಹಾಗೂ ಎನ್ ಡಿ ಆರ್ ಎಫ್ ತಂಡ ನಿರಂತರವಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಕೇರಳದ ಚೂರಲ್ ಮಲ ದಲ್ಲಿ ವಾಸವಾಗಿದ್ದ ಚಾಮರಾಜನಗರದ ದಂಪತಿ ಕೂಡ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ರತ್ನಮ್ಮ ಹಾಗೂ ರಾಜೇಂದ್ರ ದಂಪತಿ ಭೂ ಕುಸಿತ ಘಟನೆ ಬಳಿಕ ನಾಪತ್ತೆಯಾಗಿದ್ದು, ಯಾವುದೇ ಸುಳಿವು ಸಿಗುತ್ತಿಲ್ಲ.
ರತ್ಮಮ್ಮ ಹಾಗೂ ರಾಜೇಂದ್ರ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೇರಳದ ಚೂರಲ್ ಮಲದಲ್ಲಿ ಕೆಲಸ ಮಾಡುತ್ತಿದ್ದರು. ಚೂರಲ್ ಮಲದಲ್ಲಿಯೂ ಭೂ ಕುಸಿತ ದುರಂತ ಸಂಭವಿಸಿದ್ದು, ಘಟನೆ ಬಳಿಕ ಕುಟುಂಬದವರು ದಂಪತಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಈ ಮಧ್ಯೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ವಯನಾಡಿನಲ್ಲಿ ಸಂಭವಿಸಿದ ದುರಂತದಲ್ಲಿ ಕರ್ನಾಟಕದವರು ಯಾರಾದುರು ಇದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಗುಂಡ್ಲು ಪೇಟೆಯಿಂದ ಎರಡು ರೆಸ್ಕ್ಯೂ ತಂಡ ರವಾನಿಸಲಾಗಿದೆ. ಪೊಲೀಸರು ಕೂಡ ಘಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.