ಚಲಿಸುತ್ತಿದ್ದ ಕೇರಳದ ಸರ್ಕಾರಿ ಬಸ್ ನಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಮೇ 29 ರಂದು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ತ್ರಿಶೂರ್‌ನಿಂದ ಕೋಝಿಕ್ಕೋಡ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 37 ವರ್ಷದ ಮಹಿಳೆಗೆ ಸಾರಿಗೆ ಸಿಬ್ಬಂದಿ, ವೈದ್ಯರು ಮತ್ತು ಸ್ಥಳೀಯರು ಸಮಯೋಚಿತ ನೆರವು ನೀಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ತ್ರಿಶೂರ್ ನಿಂದ ಬಸ್ಸು ದೂರ ಕ್ರಮಿಸಿ ಪೆರಮಂಗಲಂ ಪ್ರದೇಶವನ್ನು ದಾಟಿದ ನಂತರ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಈ ವಿಷಯ ತಿಳಿದ ಬಸ್ ಚಾಲಕ ತ್ರಿಶೂರ್ ಕಡೆಗೆ ಬಸ್ ತಿರುಗಿಸಿದರು. ಬಸ್ ಸಿಬ್ಬಂದಿ ವೈದ್ಯಕೀಯ ಸಹಾಯಕ್ಕಾಗಿ ತ್ರಿಶೂರ್‌ನ ಅಮಲಾ ಆಸ್ಪತ್ರೆಗೆ ಕರೆ ಮಾಡಿ ಮಾಹಿತಿ ನೀಡಿದರು.
ಬಸ್ ಆಸ್ಪತ್ರೆ ಬಳಿ ಬಂದ ನಂತರ, ಬಸ್‌ನಲ್ಲಿಯೇ ವೈದ್ಯಕೀಯ ಸಿಬ್ಬಂದಿ ಹೆರಿಗೆ ಕಾರ್ಯವಿಧಾನ ನಡೆಸಿದರು. ಮಗುವಿನ ಜನನಕ್ಕೆ ಸಹಾಯ ಮಾಡುವ ವ್ಯವಸ್ಥೆಯನ್ನು ಬಸ್ ನೊಳಗೆ ಒದಗಿಸಲಾಗಿತ್ತು. ಹೆರಿಗೆ ನಂತರ ಮಹಿಳಾ ಸಿಬ್ಬಂದಿ ನವಜಾತ ಮಗುವನ್ನು ಎತ್ತಿಕೊಂಡು ಬಸ್‌ನಿಂದ ಕೆಳಗಿಳಿದು ಆಸ್ಪತ್ರೆಯೊಳಕ್ಕೆ ಬಂದರು. ಹೆರಿಗೆಯ ನಂತರ ತಾಯಿ ಮತ್ತು ಹೆಣ್ಣು ಮಗುವನ್ನು ಹೆಚ್ಚಿನ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಸಮಯವನ್ನು ವ್ಯರ್ಥ ಮಾಡದೇ ಮಹಿಳೆಯನ್ನು ವಾರ್ಡ್‌ಗೆ ಕರೆದೊಯ್ದರು.
ಆಸ್ಪತ್ರೆ ಸಿಬ್ಬಂದಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದರಿಂದ ಪ್ರಯಾಣಿಕರು ಸಂತೋಷಪಟ್ಟರು.