ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಅಂದ್ರೆ ಅದು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಮೈಲಿಗಲ್ಲು ಅಂತಾನೇ ಪರಿಗಣಿಸಲಾಗುತ್ತದೆ. ಎಲ್ಲಾ ವಿಷಯಗಳಲ್ಲಿ ಎ-ಪ್ಲಸ್ ಗ್ರೇಡ್ ಪಡೆಯುವ ವಿದ್ಯಾರ್ಥಿಗಳು ಗಮನ ಸೆಳೆಯುತ್ತಾರೆ. ಇದೀಗ ಕೇರಳದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಫ್ಲೆಕ್ಸ್ ಬೋರ್ಡ್‌ಗಳನ್ನು ಹೆಚ್ಚಾಗಿ ಹಾಕಲಾಗಿದೆ. ಅಂಕಗಳನ್ನು ಯಶಸ್ಸಿನ ನಿಯತಾಂಕವಾಗಿ ಬಿಂಬಿಸಲಾಗುತ್ತದೆ.
ಈ ಮಧ್ಯೆ ಕೇರಳದ ಪತ್ತನಂತಿಟ್ಟದ ಹತ್ತನೇ ತರಗತಿಯ ವಿದ್ಯಾರ್ಥಿ ಜಿಷ್ಣು ಅಕಾ ಕುಂಜಕ್ಕು ಎಂಬಾತ ಫ್ಲೆಕ್ಸ್ ಬೋರ್ಡ್ ಅಳವಡಿಸಿ ಪರೀಕ್ಷೆಯಲ್ಲಿ ತನ್ನದೇ ಆದ ಯಶಸ್ಸನ್ನು ಆಚರಿಸುತ್ತಿದ್ದಾನೆ. 2022 ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾನು ‘ತನ್ನನ್ನು’ ಅಭಿನಂದಿಸುತ್ತೇನೆ ಎಂದು ಫ್ಲೆಕ್ಸ್ ಬೋರ್ಡ್ನಲ್ಲಿ ಬರೆಯಲಾಗಿದೆ. ಜೊತೆಗೆ ಜಿಷ್ಣುವಿನ ಫೋಟೋವನ್ನು ಸಹ ಫ್ಲೆಕ್ಸ್ ನಲ್ಲಿ ಹಾಕಲಾಗಿದ್ದು, “ಕಥೆ ಈಗ ಪ್ರಾರಂಭವಾಗುತ್ತದೆ. ಕುಂಜಕ್ಕು ಆವೃತ್ತಿ 3.0” ಎಂದು ಬರೆಯಲಾಗಿದೆ.
ಜಿಷ್ಣುವಿನ ಈ ಫ್ಲೆಕ್ಸ್ ಶೀಘ್ರದಲ್ಲೇ ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರ ಗಮನ ಸೆಳೆದಿದ್ದು, ಈತನನ್ನು ಶ್ಲಾಘಿಸಿದ್ದಾರೆ. ಎ ಪ್ಲಸ್ ಪಡೆದವರಿಗೆ ಫ್ಲೆಕ್ಸ್ ಬೋರ್ಡ್ ಹಾಕಿದ್ದನ್ನು ನೋಡಿಯೇ ಫ್ಲೆಕ್ಸ್ ಬೋರ್ಡ್ ಹಾಕುವ ಯೋಚನೆ ಬಂತು ಎಂದು ಜಿಷ್ಣು ತಿಳಿಸಿದ್ದಾನೆ. ಇನ್ನು ಈ ಫ್ಲೆಕ್ಸ್ ಬೋರ್ಡ್ ಅಳವಡಿಸಲು ಸ್ನೇಹಿತರು ಸಹಾಯ ಮಾಡಿದ್ದಾಗಿ ಹೇಳಿದ್ದಾನೆ.
ವರದಿಯ ಪ್ರಕಾರ, 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಜಿಷ್ಣು ಸಾಕಷ್ಟು ಹೆಣಗಾಡಿದ್ದ. ವಾರದ ಹಿಂದೆಯಷ್ಟೇ ಇವರ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿದ್ದು, ಸೀಮೆಎಣ್ಣೆ ದೀಪದ ಮಂದ ಬೆಳಕಿನಲ್ಲೇ ಓದುತ್ತಿದ್ದ. ಅವನ ಪೋಷಕರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.