alex Certify 75 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

75 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಅರೆಸ್ಟ್

ಕೇರಳದ ಮಲಪ್ಪುರಂ ಜಿಲ್ಲೆಯ ಶಾಲೆಯೊಂದರ ಶಿಕ್ಷಕ ತನ್ನ 30 ವರ್ಷಗಳ ಸೇವೆಯಲ್ಲಿ 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ.

58 ವರ್ಷದ ಶಿಕ್ಷಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ಆತನನ್ನು ಶಶಿಕುಮಾರ್ ಎಂದು ಗುರುತಿಸಲಾಗಿದೆ. ಸಿಪಿಐ(ಎಂ) ಮುಖಂಡನಾಗಿರುವ ಶಿಕ್ಷಕ ಮೂರು ಬಾರಿ ಮಲಪ್ಪುರಂ ಪುರಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು, ಮಾರ್ಚ್ 31 ರಂದು ಮಲಪ್ಪುರಂನ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿವೃತ್ತರಾಗಿದ್ದು, ಅವರ ನಿವೃತ್ತಿ ಕಾರ್ಯಕ್ರಮದ ಫೋಟೋವನ್ನು ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಮಾಡಲಾಗಿದೆ.

ಶಶಿಕುಮಾರ್ ಫೋಟೋ ಪೋಸ್ಟ್ ಮಾಡಿದ ಕೂಡಲೇ ಹಳೆಯ ವಿದ್ಯಾರ್ಥಿಯೊಬ್ಬರು ಪೋಸ್ಟ್‌ ಗೆ ಕಾಮೆಂಟ್ ಮಾಡಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ನಂತರ, ಶಿಕ್ಷಕನಿಂದ ಕಿರುಕುಳಕ್ಕೆ ಒಳಗಾದ ಹಲವಾರು ವಿದ್ಯಾರ್ಥಿಗಳು ಅವರ ವಿರುದ್ಧ #metoo ಅಭಿಯಾನ ಪ್ರಾರಂಭಿಸಿದರು.

ಆದರೆ, ಕಳೆದ ತಿಂಗಳು ಸಿಪಿಐ(ಎಂ)ನಿಂದ ಉಚ್ಛಾಟಿತರಾಗಿರುವ ಶಶಿಕುಮಾರ್, ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ತನ್ನನ್ನು ಗುರಿಯಾಗಿಸಿ ಇಂತಹ ಆರೋಪ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಶಶಿಕುಮಾರ್ ಶಾಲೆಯಲ್ಲಿ ಮೂರು ದಶಕಗಳ ಸೇವೆ ಸಲ್ಲಿಸಿದ ಅವಧಿಯಲ್ಲಿ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಿರುಕುಳದ ಆರೋಪ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳು ದೂರುಗಳನ್ನು ಸಲ್ಲಿಸಲು ಸಿದ್ಧರಿಲ್ಲ, ಮಲಪ್ಪುರಂ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೆಡೆ, ಶಾಲಾ ಹಳೆ ವಿದ್ಯಾರ್ಥಿ ಸಂಘವು, ಕೆಲವು ವಿದ್ಯಾರ್ಥಿಗಳು ಶಶಿಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ, ಆದರೆ ಶಾಲಾ ಆಡಳಿತವು ಅವನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಮಲಪ್ಪುರಂ ಎಸ್ಪಿ ಸುಜಿತ್ ದಾಸ್ ತಿಳಿಸಿದ್ದಾರೆ. ತಂಡವು ಹಿಂದಿನ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ. ರಾಜ್ಯದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅವರು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಶಾಲಾ ಆಡಳಿತದ ಕಡೆಯಿಂದ ಏನಾದರೂ ತಪ್ಪಾಗಿದೆಯೇ ಎಂದು ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ನಿರ್ದೇಶಕ ಬಾಬು ಕೆ. ಅವರಿಗೆ ಆದೇಶಿಸಿದ್ದಾರೆ.

ಸಿಪಿಐ(ಎಂ) ಕೂಡ ಶಿಕ್ಷಕನಿಗೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಆಂತರಿಕ ವಿಚಾರಣೆ ಪ್ರಾರಂಭಿಸಿದೆ. ಶಿಕ್ಷಕನ ವಿರುದ್ಧ ದಾಖಲಾಗಿರುವ ಕೆಲವು ಪ್ರಕರಣಗಳು ದಶಕಕ್ಕೂ ಹೆಚ್ಚು ಹಳೆಯದಾಗಿರುವ ಕಾರಣ ಪೋಕ್ಸೊ ಕಾಯಿದೆಯ ನಿಬಂಧನೆಗಳ ಬಗ್ಗೆ ಪೊಲೀಸರು ಕಾನೂನು ಅಭಿಪ್ರಾಯವನ್ನು ಕೇಳಿದ್ದಾರೆ.

ಶಾಲೆಯ 500 ಕ್ಕೂ ಹೆಚ್ಚು ಮಕ್ಕಳು ಶಶಿಕುಮಾರ್‌ನಿಂದ ಲೈಂಗಿಕ ದೌರ್ಜನ್ಯವನ್ನು ಎದುರಿಸಿರಬಹುದು. ಆದರೆ, ಅವರಲ್ಲಿ ಹೆಚ್ಚಿನವರು ಅದನ್ನು ಹೇಳಿಕೊಳ್ಳಲು ಸಿದ್ಧರಿಲ್ಲ ಎಂದು ಹಳೆಯ ವಿದ್ಯಾರ್ಥಿಗಳ ಸಂಘ ಹೇಳಿಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...