
ತಿರುವನಂತಪುರಂ: ಟ್ಯೂಷನ್ ಸೆಂಟರ್ ಬಳಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು, ಹೊಡೆದಾಟಕ್ಕೆ ಕಾರಣವಾಗಿದ್ದು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೇರಳದ ಕೋಝಿಕ್ಕೋಡ್ ನಲ್ಲಿ ನಡೆದಿದೆ.
ಮಾರಾಮಾರಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 10 ನೇ ತರಗತಿ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ಮೊಹಮ್ಮದ್ ಶಹಬಾಸ್ ಎಂದು ಗುರುತಿಸಲಾಗಿದೆ.
ಫೆ.23ರಂದು ಟ್ಯೂಷನ್ ಸೆಂಟರ್ ನಲ್ಲಿ ಬಿಳ್ಕೊಡುಗೆ ಸಮಾರಂಭದ ನಿಮಿತ್ತ ಪಾರ್ಟಿ ನಡೆದಿತ್ತು. ಈ ವೇಳೆ ವಿದ್ಯಾರ್ಥಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿತ್ತು. ಹೊಡೆದಾಟದಲ್ಲಿ ಮೊಹಮ್ಮದ್ ಶಹಬಾಸ್ ತಲೆಗೆ ಗಾಯವಾಗಿತ್ತು. ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ ಇಂದು ಕೊನೆಯುಸಿರೆಳೆದಿದ್ದಾನೆ.
ಪ್ರಕರಣ ಸಂಬಂಧ ಪೊಲೀಸರು ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.