ತಿರುವನಂತಪುರಂ: ಕೇವಲ ಮಣ್ಣು ಮತ್ತು 65 ಗಿಡಮೂಲಿಕೆ ಸಸ್ಯಗಳಿಂದ 200 ಚದರ ಅಡಿ ವಿಸ್ತೀರ್ಣದಲ್ಲಿ ಮನೆಯನ್ನು ಕೇರಳದ ಶಿಲ್ಪಿಯೊಬ್ಬರು ನಿರ್ಮಿಸಿದ್ದಾರೆ.
ವೃತ್ತಿಯಲ್ಲಿ ಶಿಲ್ಪಿಯಾಗಿರುವ ಸಿಲಾ ಸಂತೋಷ್ ಅವರು 65 ಗಿಡಮೂಲಿಕೆಗಳ ಸಸ್ಯಗಳೊಂದಿಗೆ ಸಂಪೂರ್ಣವಾಗಿ ಮಣ್ಣಿನಿಂದ ಮಾಡಿದ ಸುಮಾರು 200 ಚದರ ಅಡಿ ವಿಸ್ತೀರ್ಣದಲ್ಲಿ ವಿಶಿಷ್ಟವಾದ ಮನೆಯೊಂದನ್ನು ನಿರ್ಮಿಸಿದ್ದಾರೆ.
ರಾಜ್ಯ ರಾಜಧಾನಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಅಡೂರಿನಲ್ಲಿ, ಅವರ ಆತ್ಮೀಯ ಸ್ನೇಹಿತ ಜಾಕೋಬ್ ತಂಕಚನ್ ಅವರ ಐದು ಎಕರೆ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಲಾಗಿದೆ. 39 ವರ್ಷದ ಸಂತೋಷ್ ಅವರು, ಶಿಲ್ಪಕಲೆಯಲ್ಲಿ ವಿಶೇಷವಾಗಿ ದೇವಾಲಯಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗಿದೆ.
ರಾಜಕೀಯ ಕಾರ್ಯಕರ್ತರಿಗೆ ಮುಖ್ಯ ಮಾಹಿತಿ: ವಾಹನಗಳ ಮೇಲೆ ಪಕ್ಷದ ಧ್ವಜ, ಚಿಹ್ನೆ ಬಳಕೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ
ಸಂತೋಷ್ ಗೆ ವಿವಿಧ ಗಿಡಮೂಲಿಕೆಗಳು, ವಿಶೇಷವಾಗಿ ಔಷಧೀಯ ಗಿಡಮೂಲಿಕೆಗಳೆಂದ್ರೆ ಎಲ್ಲಿಲ್ಲದ ಪ್ರೀತಿ. ಕಳೆದ ಆರು ವರ್ಷಗಳಿಂದ ಅವರು ಅವರದ್ದೇ ಆದ ಸಂಶೋಧನೆ ನಡೆಸುತ್ತಿದ್ದರು. ವಿವಿಧ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯವನ್ನು ಬೆರೆಸಿ ಮತ್ತು ಅದರ ಸಾಂದ್ರತೆಯನ್ನು ಪರೀಕ್ಷಿಸುವುದರ ಜೊತೆಗೆ ಅದನ್ನು ಮಣ್ಣಿನೊಂದಿಗೆ ಬೆರೆಸಿ, ಮನೆ ನಿರ್ಮಿಸಿದ್ದಾರೆ.
ಅಷ್ಟೇ ಅಲ್ಲ, ಆಯುರ್ವೇದ ಮತ್ತು ಗಿಡಮೂಲಿಕೆ ಸಸ್ಯಗಳ ಸುಮಾರು 40 ವಿವಿಧ ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕ ಜಮೀನಿನಲ್ಲಿ ಮನೆ ನಿರ್ಮಿಸಿದ್ದಾರೆ.
ಮನೆಯ ಮೂಲೆ-ಮೂಲೆಯು ಗಿಡಮೂಲಿಕೆಗಳ ಪರಿಮಳದಿಂದ ಕೂಡಿದೆ. ಅಲ್ಲದೆ ತುಂಬಾ ತಂಪಾಗಿರುವುದರಿಂದ ಇದಕ್ಕೆ ಫ್ಯಾನ್ ಅಥವಾ ಎಸಿಯ ಅಗತ್ಯವೂ ಇಲ್ಲ.