ಶ್ರೀಕ್ಷೇತ್ರ ಶಬರಿಮಲೆಯ ವಿವಿಧೆಡೆ ಸಂಸ್ಥೆಗಳು ಮತ್ತು ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿದ್ದು ಈ ವೇಳೆ 3.91 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ . ಹತ್ತು ದಿನಗಳಿಂದ ಸನ್ನಿಧಾನಂ ಪ್ರದೇಶದ ವಾಣಿಜ್ಯ ಸಂಸ್ಥೆಗಳು ಮತ್ತು ಹೋಟೆಲ್‌ಗಳಲ್ಲಿ ವಿವಿಧ ತಂಡಗಳು 420 ತಪಾಸಣೆ ನಡೆಸಿವೆ.
ಸನ್ನಿಧಾನಂ, ಪಂಬಾ ಮತ್ತು ನಿಲಕ್ಕಲ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ 49 ಪ್ರಕರಣಗಳು ದಾಖಲಾಗಿದ್ದು, ಒಟ್ಟು 3.91 ಲಕ್ಷ ರೂ. ದಂಡ ವಿಧಿಸಲಾಗಿದೆ. ಶಬರಿಮಲೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಅರುಣ್ ಎಸ್. ನಾಯರ್ ಮತ್ತು ಮೂವರು ಡ್ಯೂಟಿ ಮ್ಯಾಜಿಸ್ಟ್ರೇಟ್‌ಗಳ ನೇತೃತ್ವದಲ್ಲಿ ಯಾತ್ರಾರ್ಥಿಗಳ ಶೋಷಣೆಯನ್ನು ತಡೆಗಟ್ಟುವುದು, ಆರೋಗ್ಯಕರ ಮತ್ತು ಸುರಕ್ಷಿತ ಆಹಾರ ಪದಾರ್ಥಗಳ ವಿತರಣೆ ಖಚಿತಪಡಿಸುವುದು, ಯಾತ್ರಾರ್ಥಿಗಳಿಂದ ಅಧಿಕ ಶುಲ್ಕ ಪಡೆಯುವುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ತಪಾಸಣೆ ನಡೆಸಿದರು.
ಸನ್ನಿಧಾನಂನಲ್ಲಿರುವ ಒಟ್ಟು 187 ಅಂಗಡಿ, ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ. ಅಸಮರ್ಪಕ ಅಳತೆ ಮತ್ತು ತೂಕ, ಹೆಚ್ಚಿನ ಶುಲ್ಕ ವಿಧಿಸುವುದು ಮತ್ತು ಸರಿಯಾದ ದಾಖಲೆಗಳಿಲ್ಲದೆ ಆಹಾರ ಪೊಟ್ಟಣಗಳನ್ನು ಮಾರಾಟ ಮಾಡುವುದು ಸೇರಿದಂತೆ ಮುಂತಾದ ಉಲ್ಲಂಘನೆಯಡಿ 14 ಪ್ರಕರಣಗಳನ್ನು ದಾಖಲಿಸಿದ್ದು 1,35,000 ರೂ ದಂಡ ಹಾಕಲಾಗಿದೆ. ಪಂಬಾದಲ್ಲಿ 88 ತಪಾಸಣೆ ನಡೆಸಲಾಗಿದ್ದು, 18 ಪ್ರಕರಣಗಳಲ್ಲಿ 1,06,000 ರೂ. ದಂಡ ಹಾಕಲಾಗಿದೆ. ನಿಲಕ್ಕಲ್‌ನಲ್ಲಿ 145 ತಪಾಸಣೆಗಳನ್ನು ನಡೆಸಿದ್ದು 17 ಪ್ರಕರಣಗಳು ದಾಖಲಿಸಿದ್ದು ಒಟ್ಟು 1,50,000 ರೂ. ದಂಡದ ಮೊತ್ತ ಪಡೆಯಲಾಗಿದೆ.
ಹೋಟೆಲ್‌ಗಳು ಮತ್ತು ಅಂಗಡಿಗಳಲ್ಲಿ ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು, ಯಾತ್ರಾರ್ಥಿಗಳಿಗೆ ನಿಖರವಾದ ಅಳತೆ ಮತ್ತು ತೂಕದೊಂದಿಗೆ ಗುಣಮಟ್ಟದ ಆಹಾರವನ್ನು ಒದಗಿಸಲು ಮತ್ತು ಅಧಿಕ ಶುಲ್ಕ ವಿಧಿಸುವುದನ್ನು ತಡೆಯಲು ತಪಾಸಣೆ ನಡೆಸಲಾಗಿತ್ತು ಎಂದು ಶಬರಿಮಲೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಅರುಣ್ ಎಸ್. ನಾಯರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಈ ತಪಾಸಣೆ ಮುಂದುವರಿಯಲಿದೆ ಎಂದು ತಿಳಿಸಿದರು.
ಆಹಾರ ಸುರಕ್ಷತಾ ಇಲಾಖೆ, ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಕಾನೂನು ಮಾಪನ ಶಾಸ್ತ್ರ ಇಲಾಖೆಗಳೂ ತಪಾಸಣೆಯನ್ನು ತೀವ್ರಗೊಳಿಸಿವೆ. ಶಬರಿಮಲೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಅರುಣ್ ಎಸ್.ನಾಯರ್, ಅಪರ ಜಿಲ್ಲಾಧಿಕಾರಿ ಎ.ವಿಜಯನ್, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಪಿ.ಕೆ. ದಿನೇಶ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ತಪಾಸಣೆ ನಡೆಸಿದರು.