ವರುಣ ರಾಕ್ಷಸನ ಆರ್ಭಟ ಮತ್ತೆ ಶುರುವಾಗಿದೆ. ಈಗಾಗಲೇ ಅರ್ಧಕ್ಕರ್ಧ ಕರ್ನಾಟಕ ಸುರಿಯುತ್ತಿರುವ ಭಾರೀ ಮಳೆಗೆ ತತ್ತರಿಸಿ ಹೋಗಿದೆ. ಕೇವಲ ಕರ್ನಾಟಕ ಮಾತ್ರ ಅಲ್ಲ ನೆರೆ ರಾಜ್ಯ ಕೇರಳದಲ್ಲೂ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಪ್ರವಾಹ ಮತ್ತು ಭೂಕುಸಿತ ಸಂಭವಿಸುತ್ತಿದೆ.
ದೇವರ ನಾಡು ಕೇರಳದಲ್ಲಿ ಪ್ರವಾಹ ಅಂದರೆ ಸಾಕು, ಅಲ್ಲಿ ಜನರಿಗಿಂತ ಹೆಚ್ಚಾಗಿ ಪರದಾಡೋದು ಕಾಡು ಪ್ರಾಣಿಗಳು, ಅದರಲ್ಲೂ ಆನೆಗಳು. ತ್ರಿಶೂರ್ ಜಿಲ್ಲೆಯ ಚಾಲಕ್ಕುಡಿ ನದಿಯ ಬಲವಾದ ಪ್ರವಾಹಕ್ಕೆ ಸಿಲುಕಿದ ಕಾಡು ಆನೆಯೊಂದು ಧುಮ್ಮುಕ್ಕಿ ಹರಿಯುತ್ತಿರುವ ಮಳೆಯ ನೀರಿನ ಮಧ್ಯದಲ್ಲಿ ಸಿಕ್ಕಾಕಿಕೊಂಡು ಹೆಣಗಾಡುತ್ತಿತ್ತು.
ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸುಮಾರು ಮೂರು ಗಂಟೆಗಳ ಕಾಲ ಹರಿಯುತ್ತಿರುವ ನೀರಿನ ಮಧ್ಯೆಯೇ ನಿಂತು ಆನೆ ಅದರಿಂದ ಹೊರ ಬರುವುದಕ್ಕೆ ಪರದಾಡಿದೆ. ಕೊನೆಗೆ ಅಲ್ಲೇ ಇದ್ದ ಮರದ ಆಸರೆಯಿಂದ ಸುರಕ್ಷಿತವಾಗಿ ಬದುಕುಳಿದಿದೆ.
ನಿಜಕ್ಕೂ ಆನೆ ಧೈರ್ಯ ಮಾಡಿ ಆ ಹರಿಯುತ್ತಿರುವ ನೀರಿನಲ್ಲಿ ನಿಂತು, ಒಂದೊಂದೆ ಹೆಜ್ಜೆ ಹಾಕುತ್ತಿದ್ದ ಪರಿಯೇ ಅದ್ಭುತವಾಗಿತ್ತು. ನದಿ ರೊಚ್ವಿಗೆದ್ದು ಹರಿಯುತ್ತಿರುವ ರೀತಿ ನೋಡ್ತಿದ್ರೆ ಆನೆ ಆ ನೀರಿನಲ್ಲಿ ಕೊಚ್ಚಿ ಹೋಗುತ್ತೇನೋ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಆನೆಯ ಛಲದಿಂದ ಸೇಫ್ ಆಗಿ ಬದುಕುಳಿದಿದ್ದೇ ರೋಚಕ.