ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುವಂತಹ ಘಟನೆ ನಡೆದಿದೆ. ಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷೆ ಲತಿಕಾ ಸುಭಾಷ್ ಭಾನುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇದಕ್ಕೆ ಮೊದಲು ಅವರು ತಲೆ ಕೂದಲು ಬೋಳಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಎಟುಮನೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಲತಿಕಾ ತಮಗೆ ಟಿಕೆಟ್ ನಿರಾಕರಿಸಿದ್ದರಿಂದ ಆಕ್ರೋಶಗೊಂಡು ತಲೆ ಕೂದಲು ಬೋಳಿಸಿಕೊಂಡಿದ್ದಾರೆ.
ಕಾಂಗ್ರೆಸ್ ಕಚೇರಿ ಎದುರು ತಮ್ಮ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದ ಅವರು, ಕಾಂಗ್ರೆಸ್ ಮಹಿಳೆಯರನ್ನು ಕಡೆಗಣಿಸಿದೆ ಎಂದು ದೂರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 86 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು 9 ಮಹಿಳೆಯರಿಗೆ ಟಿಕೆಟ್ ನೀಡಿದೆ. ತಮಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಲತಿಕಾ ಈ ರೀತಿ ಮಾಡಿಕೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಯಾವುದೇ ನಾಯಕರು ಇಂತಹ ಕಠಿಣ ನಿರ್ಧಾರ ಕೈಗೊಂಡಿರುವುದು ಕೇರಳದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಲತಿಕಾ 2018ರಲ್ಲಿ ಮಹಿಳಾ ಕಾಂಗ್ರೆಸ್ ಮುಖ್ಯಸ್ಥರಾಗಿದ್ದರು. ಕೇರಳ ಕಾಂಗ್ರೆಸ್ ಘಟಕದಿಂದ ನನಗೆ ಅನ್ಯಾಯವಾಗಿದೆ. ನಾವು ಮಹಿಳೆಯರಿಗೆ ಶೇಕಡ 20 ರಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದೆವು. ಪ್ರತಿ ಜಿಲ್ಲೆಯಿಂದ ಕನಿಷ್ಠ ಒಬ್ಬರು ಮಹಿಳೆಯರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆವು. ಆದರೆ, ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅಳುತ್ತಲೇ ಅವರು ತಿಳಿಸಿದ್ದು, ನಾನು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಸಾಮಾನ್ಯ ಕಾರ್ಯಕರ್ತಳಾಗಿ ಇರುತ್ತೇನೆ ಎಂದು ತಿಳಿಸಿದ್ದಾರೆ.