ಬೆಂಗಳೂರು: ಸೈಬರ್ ಪ್ರಕರಣದ ತನಿಖೆಗೆ ಕೇರಳಕ್ಕೆ ತೆರಳಿದ್ದ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸರ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಸೇರಿ ನಾಲ್ವರು ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ವೈಟ್ ಫೀಲ್ಡ್ ಸೈಬರ್ ಕ್ರೈಂ ಠಾಣೆ ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ ಟೇಬಲ್ ಗಳಾದ ಶಿವಾನಿ, ವಿಜಯ್ ಕುಮಾರ್ ಹಾಗೂ ಕಾನ್ಸ್ ಟೇಬಲ್ ಸಂಕೇತ್ ಅಮಾನತುಗೊಂಡವರು.
ಎಸಿಪಿ ವರದಿ ಆಧರಿಸಿ ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಪ್ರಕರಣದ ತನಿಖೆ ಕಾರ್ಯವಿಧಾನದಲ್ಲಿ ಲೋಪ ಹಿನ್ನೆಲೆಯಲ್ಲಿ ನಾಲ್ವರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ.
ಸೈಬರ್ ಕ್ರೈಂ ಪ್ರಕರಣದ ತನಿಖೆಗೆ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನೇತೃತ್ವದ ತಂಡ ಕೇರಳಕ್ಕೆ ತೆರಳಿತ್ತು. ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಕೇಸ್ ಮುಚ್ಚಿ ಹಾಕಲು 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡ ಹಣ ಪಡೆಯುವಾಗ ಇನ್ಸ್ ಪೆಕ್ಟರ್ ಸಿಕ್ಕಿಬಿದ್ದಿದ್ದಾರೆ ಎಂದು ಕೇರಳ ಪೊಲೀಸರು ಆರೋಪಿಸಿದ್ದು, ನಾಲ್ವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ನಾಲ್ವರನ್ನು ಅಮಾನತು ಮಾಡಲಾಗಿದೆ.