ಕೊಚ್ಚಿ: ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ನಾಲ್ಕು ತಿಂಗಳ ಮಗು ಹಸಿವಿನಿಂದ ಅಳುತ್ತಿದ್ದುದನ್ನ ಕಂಡು ಪೊಲೀಸ್ ಅಧಿಕಾರಿಯೊಬ್ಬರು ಎದೆಹಾಲುಣಿಸಿ ಮಮತೆ ತೋರಿದ ಘಟನೆ ಕೇರಳದ ಎರ್ನಾಕುಲಂ ಆಸ್ಪತ್ರೆಯಲ್ಲಿ ನಡೆದಿದೆ.
ಬಿಹಾರದ ಪಾಟ್ನಾ ಮೂಲದ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಕೆಲ ದಿನಗಳಿಂದ ಕೇರಳದ ಎರ್ನಾಕುಲಂನಲ್ಲಿ ವಾಸವಾಗಿದ್ದಾರೆ. ಮಹಿಳೆಯ ಪತಿ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾನೆ. ಮಹಿಳೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ನಾಲ್ಕು ಮಕ್ಕಳೊಂದಿಗೆ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ತೀವ್ರ ಉಸಿರಾಟದ ತೊಂದರೆಯಿಂದ ಮಹಿಳೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಮೂರು ಮಕ್ಕಳು ಆಸ್ಪತ್ರೆಯ ವಾರ್ಡ್ ನಿಂದ ಹೊರಗಿದ್ದು, ಮತ್ತೋರ್ವ ನಾಲ್ಕು ತಿಂಗಳ ಹಸುಗೂಸು ತಾಯಿಯ ಪಕ್ಕದಲ್ಲೇ ಮಲಗಿದ್ದು, ಹಸಿವಿನಿಂದ ಅಳುತ್ತಿತ್ತು. ಹಸುವಿನಿಂದ ಕಂಗೆಟ್ಟಿದ್ದ ಕಂದಮ್ಮ ಅಳುತ್ತಿರುವುದನ್ನು ಗಮನಿಸಿದ ಮಹಿಳಾ ಪೊಲೀಸ್ ಅಧಿಕಾರಿ ಆರ್ಯಾ, ಮಗುವನ್ನು ಎತ್ತಿಕೊಂಡು ಎದೆಹಾಲುಣಿಸಿ ಮಮತೆ ತೊರಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿ ಆರ್ಯಾ ಅವರಿಗೆ 9 ತಿಂಗಳ ಮಗುವಿದೆ.
ಪೊಲೀಸ್ ಅಧಿಕಾರಿ ಕಾರ್ಯಕ್ಕೆ ನಗರದ ಪೊಲೀಸರು, ಆಸ್ಪತ್ರೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅವರನ್ನು ಶಿಶುಪಾಲನಾ ಕೇಂದ್ರಕ್ಕೆ ನೀಡಲಾಗಿದೆ.