ತಿರುವನಂತಪುರಂ: ಕೇರಳದ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಹಾಗೂ ಸೆಲ್ಫಿ ಬೂತ್ ಗಳನ್ನು ಅಳವಡಿಸುವುದಿಲ್ಲ ಎಂದು ಕೇರಳ ಸರ್ಕಾರ ಹೇಳಿದೆ.
ಕೇಂದ್ರದ ಯೋಜನೆಯಡಿ ಅಕ್ಕಿ ನೀಡುತ್ತಿರುವುದರಿಂದ ಕೇರಳದ ಎಲ್ಲಾ 14,000 ನ್ಯಾಯ ಬೆಲೆ ಅಂಗಡಿಗಳಲ್ಲಿ ಮೋದಿ ಫೋಟೋ ಅಳವಡಿಕೆಗೆ ಮತ್ತು 550 ಅಂಗಡಿಗಳಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಈ ಯೋಜನೆ ಚುನಾವಣೆ ಪ್ರಚಾರದ ಭಾಗವಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆರೋಪಿಸಿದ್ದು, ಇದಕ್ಕೆ ಅವಕಾಶ ನೀಡಲ್ಲ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಕೇರಳ ಸಚಿವ ಸಂಪುಟ ಸದಸ್ಯರು ದೆಹಲಿಯಲ್ಲಿ ಇತ್ತೀಚೆಗಷ್ಟೇ ಪ್ರತಿಭಟನೆ ನಡೆಸಿದ್ದರು. ಈಗ ನ್ಯಾಯಬೆಲೆ ಅಂಗಡಿಗಳಲ್ಲಿ ಮೋದಿ ಅವರ ಫೋಟೋ ಹಾಕುವುದಿಲ್ಲ ಎಂದು ಕೇರಳ ಸರ್ಕಾರ ಹೇಳಿದೆ.