ಕೇರಳ ಗ್ರಾಮಗಳ ಕನ್ನಡದ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಗಳ ಯಾವುದೇ ಹೆಸರನ್ನು ಬದಲಾವಣೆ ಮಾಡುವುದಿಲ್ಲವೆಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.
ಕಾಸರಗೋಡು ತಾಲೂಕಿನ ಕನ್ನಡ ಗ್ರಾಮಗಳ ಹೆಸರನ್ನು ಮಲಯಾಳಂಗೆ ಬದಲಾಯಿಸಲು ಕೇರಳ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ರಾಜ್ಯದ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿ ಇಂತಹ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸೇರಿದಂತೆ ಹಲವು ಪ್ರಮುಖರು ಕನ್ನಡ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಸರ್ಕಾರ, ಯಾವುದೇ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡುವುದಿಲ್ಲ. ಕಾಸರಗೋಡು, ಮಂಜೇಶ್ವರ ಗ್ರಾಮಗಳ ಹೆಸರನ್ನು ಬದಲಾಯಿಸುವುದಿಲ್ಲ. ಕೇರಳ ಸರ್ಕಾರದ ಬಳಿ ಅಂತಹ ಯಾವುದೇ ಪ್ರಸ್ತಾಪವಿಲ್ಲ. ಗ್ರಾಮಗಳ ಹೆಸರು ಬದಲಾವಣೆ ಮಾಡಲ್ಲ. ಇದೆಲ್ಲ ವದಂತಿ ಎಂದು ಸ್ಪಷ್ಟಪಡಿಸಿದೆ.