ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ನಂತರ ಕೇರಳದಲ್ಲಿ ಆಕೆಯ ಪತಿಯನ್ನ ಬಂಧಿಸಲಾಗಿದೆ. ಈ ಮೂಲಕ ಕೊಲೆ ಪ್ರಕರಣ 17 ವರ್ಷದ ತಾರ್ಕಿಕ ಅಂತ್ಯ ಕಂಡಿದೆ. ಬಂಧಿತ ವ್ಯಕ್ತಿ ಅಂಚೆ ಕಚೇರಿಯ ನಿವೃತ್ತ ಸಿಬ್ಬಂದಿ.
ಮೇ 26, 2006 ರಂದು, ಕೇರಳದ ಪತ್ತನಂತಿಟ್ಟ ಜಿಲ್ಲೆಯ ಬುಲ್ಲತ್ ಗ್ರಾಮದಲ್ಲಿ 50 ವರ್ಷದ ರಮಾದೇವಿಯನ್ನು ಆಕೆಯ ಮನೆಯೊಳಗೆ ಕೊಚ್ಚಿ ಕೊಲ್ಲಲಾಗಿತ್ತು. ಪೊಲೀಸರಿಗೆ ಈ ಕೇಸ್ ನಲ್ಲಿ ಕೊಲೆಗಾರ ಯಾರು ಎಂದು ನಿಖರವಾಗಿ ಪತ್ತೆ ಮಾಡಲು ಆಗಿರಲಿಲ್ಲ.
ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ರಮಾದೇವಿ ಅವರ ಪತಿ ಜನಾರ್ದನ್ ನಾಯರ್ 2007ರಲ್ಲಿ ಕ್ರಿಮಿನಲ್ ತನಿಖೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಕೊಲೆ ಪ್ರಕರಣದಲ್ಲಿ ಕಳೆದ ಮಂಗಳವಾರ ಜನಾರ್ದನನ್ ರನ್ನು ಬಂಧಿಸಲಾಗಿದೆ.
ಇತ್ತೀಚಿನ ಕೆಲ ತಿಂಗಳವರೆಗೆ ತಮಿಳುನಾಡಿನ ವಲಸೆ ಕಾರ್ಮಿಕನೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಬುಲ್ಲತ್ ಗ್ರಾಮದ ನಿವಾಸಿಗಳು ಮತ್ತು ಪೊಲೀಸರು ನಂಬಿದ್ದರು. ಏಕೆಂದರೆ ಘಟನೆ ನಡೆಯುವ ಒಂದು ವಾರದ ಹಿಂದೆ ಕೂಲಿ ಕೆಲಸ ಮಾಡಲು ಸಮೀಪದ ಮನೆಗೆ ತೆರಳಿದ್ದ ಆತ ಕೊಲೆ ಪ್ರಕರಣದ ಬಳಿಕ ನಾಪತ್ತೆಯಾಗಿದ್ದ.
ಘಟನೆ ನಡೆದ ನಂತರ ಪೊಲೀಸರು 26 ವರ್ಷದ ಕೂಲಿ ಕೆಲಸಗಾರನಿಗಾಗಿ ಕಳೆದ 17 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು. ಆದರೆ ಕಳೆದ ಮಂಗಳವಾರ 75 ವರ್ಷದ ನಿವೃತ್ತ ಅಂಚೆ ನೌಕರರಾದ ಜನಾರ್ದನನ್ ಅವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಅವರ ಬಂಧನಕ್ಕೆ ಪೊಲೀಸರಿಗೆ ಸಹಾಯ ಮಾಡಿದ್ದು ಆರೋಪಿಯ ಹೇಳಿಕೆಗಳಲ್ಲಿನ ವ್ಯತ್ಯಾಸಗಳು ಮತ್ತು ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಲಾದ ವಿಧಿವಿಜ್ಞಾನ ಸಾಕ್ಷ್ಯಗಳ ಪರೀಕ್ಷೆಯ ಫಲಿತಾಂಶ.
ಪೊಲೀಸರ ಪ್ರಕಾರ ಫೋರೆನ್ಸಿಕ್ ಪರೀಕ್ಷೆಯ ನಂತರ ಕೊಲೆಯಾದ ಮಹಿಳೆಯ ಮಣಿಕಟ್ಟಿನ ಮೇಲೆ ಪತ್ತೆಯಾದ ಕೂದಲು ಆಕೆಯ ಪತಿಗೆ ಸೇರಿದ್ದು ಎಂದು ಗುರುತಿಸಲಾಗಿದೆ.
ತನಿಖಾಧಿಕಾರಿ ಮತ್ತು ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ಸುನೀಲ್ ರಾಜ್ ಅವರು ಜನಾರ್ದನನ್ ಅವರು ತಮ್ಮ ಪತ್ನಿಯ ವರ್ತನೆಯ ಬಗ್ಗೆ ಅನುಮಾನಗೊಂಡು ಕೊಲೆ ಮಾಡಿದ್ದಾರೆ. ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದಿದ್ದಾರೆ.
2006ರ ಮೇ 26ರಂದು ಸಂಜೆ ಕೊಲೆ ನಡೆದಿದ್ದು, ಆಗ ಆಲಪ್ಪುಳ ಜಿಲ್ಲೆಯ ಸೆಂಗನೂರಿನಲ್ಲಿ ಅಂಚೆ ಇಲಾಖೆಯಲ್ಲಿ ಹಿರಿಯ ಅಕೌಂಟೆಂಟ್ ಆಗಿದ್ದ ಜನಾರ್ದನನ್ ಅವರು ತಮ್ಮ ಮನೆಯೊಳಗೆ ರಕ್ತದ ಮಡುವಿನಲ್ಲಿ ರಮಾದೇವಿ ಶವ ಪತ್ತೆಯಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದರು. ರಮಾದೇವಿ ಧರಿಸಿದ್ದ ಕೆಲವು ಆಭರಣಗಳು ನಾಪತ್ತೆಯಾಗಿವೆ ಎಂದು ಜನಾರ್ದನನ್ ಪೊಲೀಸರಿಗೆ ತಿಳಿಸಿದ್ದರು.
ಪ್ರಾಥಮಿಕ ತನಿಖೆಯಲ್ಲಿ ನೆರೆಹೊರೆಯ ಮಹಿಳೆಯೊಬ್ಬರು ಕೊಲೆಯಾದ ದಿನ ರಮಾದೇವಿ ಅವರ ಮನೆಯ ಬಳಿ 26 ವರ್ಷದ ಶಂಕಿತ ಯುವಕನನ್ನು ನೋಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದರು. ಆತ ರಮಾದೇವಿಯ ಮನೆಯ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ.
ವಾರದ ಹಿಂದೆ ಘಟನಾ ಸ್ಥಳದ ಬಳಿ ಪತ್ನಿಯೊಂದಿಗೆ ಕೂಲಿ ಕೆಲಸಕ್ಕೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕ ತನ್ನ ಮೇಲೆ ಅನುಮಾನ ಮೂಡಿದೆ ಎಂದು ತಿಳಿದು ಪತ್ನಿಯೊಂದಿಗೆ ಪರಾರಿಯಾಗಿದ್ದ ಎಂದು ನಂಬಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸಬೇಕೆಂದು ಹಲವು ಪ್ರತಿಭಟನೆಗಳು ಸಹ ಜರುಗಿದ್ದವು.
ಪೊಲೀಸರ ನಿಷ್ಕ್ರಿಯತೆಯ ವಿರುದ್ಧದ ಪ್ರತಿಭಟನೆಗಳಲ್ಲಿ ಆಸಕ್ತಿಯಿಲ್ಲದ ಜನಾರ್ದನನ್ ಅವರು 2007 ರಲ್ಲಿ ಕೇರಳ ಹೈಕೋರ್ಟ್‌ಗೆ ತನಿಖೆಯನ್ನು ಕೇರಳ ಪೊಲೀಸ್‌ನ ಅಪರಾಧ ವಿಭಾಗದ ವಿಶೇಷ ಸಮಿತಿಗೆ ಒಪ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದರು.
ಕಳೆದ ವರ್ಷ ಜುಲೈನಲ್ಲಿ ತನಿಖೆಯ ಉಸ್ತುವಾರಿ ವಹಿಸಿದ್ದ ಇನ್ಸ್ ಪೆಕ್ಟರ್ ಸುನೀಲ್ ರಾಜ್, “ಕ್ರೈಂ ಥ್ರಿಲ್ಲರ್ ಚಿತ್ರಗಳನ್ನು ವೀಕ್ಷಿಸಿದ ನಂತರ ಜನಾರ್ದನನ್‌ಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಆಲೋಚನೆ ಮಾಡಿದರು. ತಾನು ಮಾತನಾಡದೆ ಸುಮ್ಮನಿದ್ದರೆ ಇತರರು ತನ್ನನ್ನು ಅನುಮಾನಿಸಬಹುದೆಂದು ಭಾವಿಸಿದ್ದರು. ತಮ್ಮ ಮೇಲೆ ಅನುಮಾನ ಬಾರದಂತೆ ಇರಲು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ರು. ಅವರು ತಮಿಳು ಕೂಲಿಕಾರನನ್ನು ಶಂಕಿತ ಕೊಲೆಗಾರ ಎಂದು ತೋರಿಸಲು ಬಯಸಿದ್ದರು,” ಎಂದು ಹೇಳಿದ್ದಾರೆ.
ಹೆಂಡ್ತಿಯನ್ನು ಹತ್ಯೆ ಮಾಡಿದ ಬಳಿಕ ಮನೆಯ ಛಾವಣಿಯ ಮೂಲಕ ಹೊರಗೆ ಬಂದು ಬೀಗ ಹಾಕಿದ್ದ ಜನಾರ್ಧನನ್ ತಾನು ಸಿಕ್ಕಿಹಾಕಿಕೊಳ್ಳದಂತೆ ವರ್ತಿಸಿದ್ದರು. ಇದರ ನಡುವೆ ತಮಿಳುನಾಡು ಮೂಲದ ಕೂಲಿಕಾರನ ಪತ್ತೆಯೂ ಸಹ ಪೊಲೀಸರಿಗೆ ಸವಾಲಾಗಿತ್ತು. ಕೊನೆಗೆ ವಿಧಿವಿಜ್ಞಾನ ಪರೀಕ್ಷೆಯ ಫಲಿತಾಂಶದ ಮೂಲಕ ಹಾಗು ಸುಳ್ಳುಪತ್ತೆ ಪರೀಕ್ಷೆ ಮೂಲಕ ಆರೋಪಿ ಜನಾರ್ಧನನ್ ಎಂಬುದು ದೃಢವಾಯಿತು. ಹೆಂಡ್ತಿಯನ್ನು ಉದ್ದೇಶಪೂರ್ವಕವಾಗಿ ಸಾಯಿಸಿಲ್ಲವಾದರೂ ದಂಪತಿ ನಡುವಿನ ಜಗಳ ತಾರಕಕ್ಕೇರಿದ ವೇಳೆ ಹೆಂಡ್ತಿ ಮೇಲೆ ಹಲ್ಲೆ ಮಾಡಿದ ಜನಾರ್ಧನನ್ ಅವರು ಬಳಿಕ ನಿರಪರಾಧಿಯೆಂಬಂತೆ ಬಿಂಬಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.