ಇತ್ತೀಚೆಗೆ ಆನ್ಲೈನ್ ನಲ್ಲಿ ಶಾಪಿಂಗ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆಯೇ ಇ-ಕಾಮರ್ಸ್ ಸೈಟ್ ನ ಕೆಲವೊಂದು ಎಡವಟ್ಟುಗಳು ಆಗಾಗ್ಗೆ ಬಯಲಾಗುತ್ತಿರುತ್ತದೆ. ಐಫೋನ್ ಆರ್ಡರ್ ಮಾಡಿದ್ರೆ, ಸೋಪ್, 5 ರೂ. ಕಾಯಿನ್ ಪಾರ್ಸೆಲ್ ಬಂದಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಇಂಥದ್ದೆ ಮತ್ತೊಂದು ಎಡವಟ್ಟು ಬಯಲಾಗಿದೆ.
ಹೌದು, ಕೇರಳದ ವ್ಯಕ್ತಿಯೊಬ್ಬರು ತಮ್ಮ ಪಾಸ್‌ಪೋರ್ಟ್ ಗೆ ಕವರ್ ಖರೀದಿಸಲು ಆನ್ಲೈನ್ ಸಂಸ್ಥೆಯಾದ ಅಮೆಜಾನ್ ನಲ್ಲಿ ಆರ್ಡರ್ ಮಾಡಿದ್ದಾರೆ. ಆದರೆ ಮನೆಬಾಗಿಲಿಗೆ ಬಂದ ಪಾರ್ಸೆಲ್ ಅನ್ನು ತೆರೆದು ನೋಡಿದ ಮಿಥುನ್ ಬಾಬು ಅವರಿಗೆ ಶಾಕ್ ಆಗಿದೆ. ಯಾಕೆಂದ್ರೆ ಕವರ್ ಸಹಿತ ವ್ಯಕ್ತಿಯೊಬ್ಬನ ಪಾಸ್‌ಪೋರ್ಟ್ ಅನ್ನು ಪಾರ್ಸೆಲ್ ನಿಂದ ಪಡೆದಿದ್ದಾರೆ. ಕೇರಳ ವಯನಾಡ್ ನಲ್ಲಿ ಈ ಘಟನೆ ನಡೆದಿದೆ.
ನಟ ಅನುಪಮ್ ಖೇರ್ ಅವರನ್ನು ಒಣಗಿದ ಮೀನಿಗೆ ಹೋಲಿಸಿದ್ದು ಯಾರು ಗೊತ್ತಾ..? ವಿಡಿಯೋ ವೈರಲ್
ವರದಿಯ ಪ್ರಕಾರ, ಅಕ್ಟೋಬರ್ 30 ರಂದು ಅಮೆಜಾನ್‌ನಿಂದ ಮಿಥುನ್ ಬಾಬು ಪಾಸ್‌ಪೋರ್ಟ್ ಕವರ್ ಅನ್ನು ಆರ್ಡರ್ ಮಾಡಿದ್ದಾರೆ. ನವೆಂಬರ್ 1 ರಂದು ಕವರ್‌ನೊಂದಿಗೆ ಅವರು ಮೊಹಮ್ಮದ್ ಸಾಲಿಹ್ ಎಂಬುವವರಿಗೆ ಸೇರಿದ ಪಾಸ್‌ಪೋರ್ಟ್ ಅನ್ನು ಪಡೆದಿದ್ದಾರೆ. ಕವರ್‌ನಲ್ಲಿ ತ್ರಿಶೂರ್‌ನ ಕುನ್ನಂಕುಲಂ ನಿವಾಸಿ ಮೊಹಮ್ಮದ್ ಅವರ ಪಾಸ್‌ಪೋರ್ಟ್ ನೋಡಿ ದಿಗ್ಭ್ರಮೆಗೊಂಡಿದ್ದಾರೆ.
ಈ ಸಂಬಂಧ ಉತ್ಪನ್ನವನ್ನು ಹಿಂತಿರುಗಿಸಲು ಕಸ್ಟಮರ್ ಕೇರ್ ಗೆ ಮಿಥುನ್ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಉತ್ಪನ್ನವನ್ನು ಹೇಗೆ ಹಿಂತಿರುಗಿಸುವುದು ಎಂಬುದರ ಕುರಿತು ಸೂಚನೆಗಳನ್ನು ಮಾತ್ರ ಪಡೆದಿದ್ದಾರೆ. ಹೀಗಾಗಿ ಅಮೆಜಾನ್ ಗೆ ಹಿಂತಿರುಗಿಸುವ ಬದಲು, ದಾಖಲೆಯಲ್ಲಿ ಬರೆದಿರುವ ವಿಳಾಸದ ಸಹಾಯದಿಂದ ಮೊಹಮ್ಮದ್ ಅವರಿಗೆ ಪಾಸ್‌ಪೋರ್ಟ್ ಅನ್ನು ಅಂಚೆ ಮೂಲಕ ಕಳುಹಿಸಲು ನಿರ್ಧರಿಸಿದ್ದಾರೆ.