ಯುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಸಲುವಾಗಿ ಮಲಯಾಳಿ ಉದ್ಯಮಿ ಸುದೀಶ್ ಕೆ. ಎಂಬವರು 10ನೇ ತರಗತಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡುತ್ತಿದ್ದಾರೆ. ತಮಿಳುನಾಡಿನ ಪ್ರಸಿದ್ಧ ಕೊಡೆಕೆನೈಲ್ನಲ್ಲಿ ನೆಲೆಸಿರುವ ಈ ಉದ್ಯಮಿ 10ನೇ ತರಗತಿ ಫೇಲ್ ಆದವರಿಗೆ ಉಚಿತ ಪ್ರವಾಸ ಸೌಲಭ್ಯವನ್ನ ಒದಗಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಏನಾದರೂ ಸಹಾಯ ಮಾಡಬೇಕು ಎಂಬ ಹಂಬಲ ನನ್ನಲ್ಲಿ ಇತ್ತು. ಹೀಗಾಗಿ ನನ್ನ ಕೈಲಾದ ಸೌಲಭ್ಯ ಒದಗಿಸಿದ್ದೇನೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಬಂದು ಸುದೀಶ್ ಮಾಲೀಕತ್ವದ ಹೋಮ್ ಸ್ಟೇಗಳಲ್ಲಿ ಉಚಿತವಾಗಿ ವಾಸ್ತವ್ಯ ಹೂಡಬಹುದಾಗಿದೆ. ಎರಡು ದಿನಗಳ ಈ ಉಚಿತ ಪ್ರವಾಸವನ್ನ ಎಂಜಾಯ್ ಮಾಡಲು ವಿದ್ಯಾರ್ಥಿಗಳು 10ನೇ ತರಗತಿ ಫೇಲ್ ಆದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸೋದು ಕಡ್ಡಾಯವಾಗಿದೆ.
10ನೇ ತರಗತಿ ಫಲಿತಾಂಶ ಪ್ರಕಟವಾದಾಗಿನಿಂದ ಎಲ್ಲ ಕಡೆ ಸಾಧನೆ ಮಾಡಿದ ವಿದ್ಯಾರ್ಥಿಗಳ ಸುದ್ದಿಯೇ ಸದ್ದು ಮಾಡುತ್ತಿದೆ. ಯಾರಿಗೂ ಸಹ ಅನುತ್ತೀರ್ಣರಾದ ವಿದ್ಯಾರ್ಥಿಗಳ ಮನಸ್ಥಿತಿಯನ್ನ ಅರಿಯುವುದು ಬೇಕಾಗಿಯೇ ಇಲ್ಲವೆನೋ ಎಂಬಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ನಾನು ಅವರಿಗೆ ನನ್ನ ಕೈಲಾದ ಬೆಂಬಲ ನೀಡಬೇಕು ಎಂಬ ಸಲುವಾಗಿ ಈ ಪ್ಲಾನ್ ಮಾಡಿದ್ದೇನೆ ಎಂದು ಸುದೀಶ್ ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ಸುದೀಶ್ ನೀಡುತ್ತಿರುವ ಈ ಸೌಕರ್ಯದ ವಿಚಾರ ವೈರಲ್ ಆಗುತ್ತಿದ್ದಂತೆಯೇ ರಾಜ್ಯದ ಮೂಲೆ ಮೂಲೆಯಿಂದ ಅವರಿಗೆ ಕರೆಗಳು ಬರುತ್ತಿವೆಯಂತೆ.