ಕೊಚ್ಚಿ: ಕೊಟ್ಟಾಯಂನ ಕುಡಯಂಪಾಡಿ ನಿವಾಸಿ ಸದಾನಂದನ್‌ಗೆ ಹೊಸ ವರ್ಷ ಅದೃಷ್ಟ ತಂದಿದ್ದು, ಲಾಟರಿಯಲ್ಲಿ ಬರೋಬ್ಬರಿ 12 ಕೋಟಿ ರೂ. ಗೆದ್ದಿದ್ದಾರೆ.
ಬಹುಮಾನದ ಹಣದಲ್ಲಿ ನನ್ನ ಮಕ್ಕಳ ಭವಿಷ್ಯವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಲಾಟರಿ ವಿಜೇತ ಸದಾನಂದನ್ ಹೇಳಿದ್ದಾರೆ.
ವೃತ್ತಿಯಲ್ಲಿ ಪೇಂಟರ್ ಆಗಿರುವ ಸದಾನಂದನ್ ಅವರು ಭಾನುವಾರ ಬೆಳಗ್ಗೆ ಕೇರಳ ಸರ್ಕಾರದ ಕ್ರಿಸ್‌ಮಸ್-ಹೊಸ ವರ್ಷದ ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ, ಮಧ್ಯಾಹ್ನದ ವೇಳೆಗೆ, ಅವರು ಲಾಟರಿ ಗೆದ್ದಿದ್ದಾರೆ ಎಂದು ಗೊತ್ತಾಗಿದೆ. ಸದಾನಂದನ್ ಹಲವು ವರ್ಷಗಳಿಂದ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದಾರೆ. ಆದರೆ, ಈ ಬಾರಿ ಮಾತ್ರ ಅವರು ಜಾಕ್‌ಪಾಟ್ ಹೊಡೆದಿದೆ.
ಸದಾನಂದನ್ ಅವರು ತಮ್ಮ ಲಾಟರಿ ಟಿಕೆಟ್ ಅನ್ನು ಸ್ಥಳೀಯ ಏಜೆಂಟ್ ಸೆಲ್ವನ್ ಅವರಿಂದ ಖರೀದಿಸಿದ್ದಾರೆ. ತಮ್ಮ 500 ರೂ ನೋಟಿನ ಬದಲಾವಣೆಗಾಗಿ ಟಿಕೆಟ್ ಖರೀದಿಸಿದ್ದರು. ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನನಗೇ ನನ್ನ ಅದೃಷ್ಟ ನಂಬಲಾಗಲಿಲ್ಲ ಎಂದು ಸದಾನಂದನ್ ಹೇಳಿದ್ದಾರೆ.
ಈಗ ಈ ಹಣದಿಂದ ಸದಾನಂದನ್ ತಮ್ಮ ಬದುಕಿನ ದಿಕ್ಕನ್ನೇ ಬದಲಿಸುವ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಕುಟುಂಬದ ಸಾಲ ತೀರಿಸಲು ಮತ್ತು ಉತ್ತಮ ಮನೆ ನಿರ್ಮಿಸಲು ಬಯಸಿದ್ದಾರೆ. ಅವರ ಇಬ್ಬರು ಮಕ್ಕಳಾದ ಸನೀಶ್ ಮತ್ತು ಸಂಜಯ್ ಮತ್ತು ಅವರ ಪತ್ನಿ ರಾಜಮ್ಮ ಕೂಡ ಸಹಜವಾಗಿಯೇ ಗೆಲುವಿನ ಖುಷಿಯಲ್ಲಿದ್ದಾರೆ.