ಕೇರಳದ ತ್ರಿಶೂರ್ ಜಿಲ್ಲೆಯ ಪೊಟ್ಟಾದಲ್ಲಿರುವ ಫೆಡರಲ್ ಬ್ಯಾಂಕ್‌ನಲ್ಲಿ ಕ್ಷಣಾರ್ಧದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಿಯೋ ಆಂಟನಿ ಎಂಬಾತನೇ ಈ ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ಕೇವಲ ಎರಡೂವರೆ ನಿಮಿಷಗಳಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿ 15 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ.
ಆರೋಪಿ ರಿಯೋ ಆಂಟನಿ ನಿರುದ್ಯೋಗಿಯಾಗಿದ್ದು, ಪತ್ನಿ ಗಲ್ಫ್‌ನಿಂದ ಕಳುಹಿಸುವ ಹಣದಿಂದ ಜೀವನ ನಡೆಸುತ್ತಿದ್ದನು. ಆದರೆ, ಆತ 10 ಲಕ್ಷ ರೂಪಾಯಿ ಸಾಲದಲ್ಲಿ ಸಿಲುಕಿದ್ದನು. ಪತ್ನಿ ಮುಂದಿನ ತಿಂಗಳು ಮನೆಗೆ ಬರುವ ಮುನ್ನ ಸಾಲ ತೀರಿಸಲು ಈ ದರೋಡೆ ನಡೆಸಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ದರೋಡೆಗೆ ಎರಡು ವಾರಗಳ ಹಿಂದೆಯೇ ರಿಯೋ ಆಂಟನಿ ತಯಾರಿ ನಡೆಸಿದ್ದನು. ಬ್ಯಾಂಕ್ ಎದುರಿನ ಚರ್ಚ್‌ನಲ್ಲಿ ಕುಳಿತು ಬ್ಯಾಂಕ್ ಸಿಬ್ಬಂದಿಯ ಚಲನವಲನಗಳನ್ನು ಗಮನಿಸುತ್ತಿದ್ದನು. ಸಿಸಿಟಿವಿ ಫೂಟೇಜ್‌ನಲ್ಲಿ ದರೋಡೆಕೋರ ಬೈಕ್‌ನಲ್ಲಿ ಬಂದು ಹೋಗುವ ದೃಶ್ಯಗಳು ಸೆರೆಯಾಗಿದ್ದವು. ಈ ಸುಳಿವನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು.
ದರೋಡೆ ನಡೆದ ದಿನ ಆಂಟನಿ ಬೈಕ್ ಮತ್ತು ಜಾಕೆಟ್ ಬದಲಾಯಿಸಿ ಪರಾರಿಯಾಗಿದ್ದನು. ಆದರೆ, ಪೊಲೀಸರು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣವು ಕೇರಳದಲ್ಲಿ ಸಂಚಲನ ಮೂಡಿಸಿದೆ.