ಕೇರಳದ ಎಡಯಪುರಂನಲ್ಲಿ ಮೊಫಿಯಾ ಪರ್ವೀನ್ ದಿಲ್ಶಾದ್ ಎಂಬ 21 ವರ್ಷದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೋಫಿಯಾ ಆತ್ಮಹತ್ಯೆ ಪತ್ರ, ಪ್ರೀತಿಸಿ ಮದುವೆಯಾಗುವ ಹುಡುಗಿಯರಿಗೆ ಎಚ್ಚರಿಕೆ ಗಂಟೆಯಾಗಿದೆ. ಅನೇಕ ಬಾರಿ ಹುಡುಗಿಯರು, ತಂದೆ-ತಾಯಿ ಮಾತು ಕೇಳದೆ, ಪ್ರೀತಿಸಿದ ಹುಡುಗನನ್ನು ನಂಬಿ ಹೋಗ್ತಾರೆ. ಆದ್ರೆ ಜೀವನದಲ್ಲಿ ಸಾಕಷ್ಟು ಅನುಭವ ಹೊಂದಿರುವ ಪಾಲಕರಿಗೆ, ಮಕ್ಕಳಿಗೆ ಏನು ಬೇಕು ಎಂಬುದು ಗೊತ್ತಿರುತ್ತದೆ.
ಮೋಫಿಯಾ ಕೂಡ ತಂದೆ ಮಾತು ದಿಕ್ಕರಿಸಿ ಹೋಗಿದ್ದಳು. ಈಗ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್ ನೋಟ್ ನಲ್ಲಿ ‘ಅಪ್ಪಾ, ನೀವು ಹೇಳಿದ್ದು ಸರಿ. ಅವರು ಒಳ್ಳೆಯ ವ್ಯಕ್ತಿಯಾಗಿರಲಿಲ್ಲ’ ಎಂದು ಬರೆದಿದ್ದಾಳೆ. ಆತ್ಮಹತ್ಯೆ ಪತ್ರದಲ್ಲಿ ಮೋಫಿಯಾ ತನ್ನ ಸಾವಿಗೆ ತನ್ನ ಪತಿ ಮುಹಮ್ಮದ್ ಸುಹೇಲ್, ಮಾವ ಯೂಸುಫ್ ಮತ್ತು ಅತ್ತೆ ರುಖಿಯಾ ಕಾರಣ ಎಂದು ಬರೆದಿದ್ದಾಳೆ.
ವರದಿಯ ಪ್ರಕಾರ, ಮೃತಳ ತಂದೆ, ಮೋಫಿಯಾ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಅತ್ತೆ ಮನೆಯಲ್ಲಿ ಮಗಳಿಗೆ ಸಾಕಷ್ಟು ಹಿಂಸೆ ನೀಡಲಾಗಿತ್ತು. ಮಗಳಿಗೆ ಪತಿ, ಮಾವ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮೋಫಿಯಾ ಆಲುವಾ, ಎಸ್ಪಿಗೂ ದೂರು ನೀಡಿದ್ದರಂತೆ. ಈ ಬಗ್ಗೆ ಪೊಲೀಸ್ ಮುಂದೆ ವಿಚಾರಣೆ ಕೂಡ ನಡೆದಿತ್ತು. ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಿಎಲ್ ಸುಧೀರ್, ಮೋಫಿಯಾ ಪತಿ ಮೊಹಮ್ಮದ್ ಸುಹೇಲ್ ಮತ್ತು ಅವರ ಕುಟುಂಬ ಸದಸ್ಯರ ಪರ ನಿಂತಿದ್ದರು ಎನ್ನಲಾಗಿದೆ. ಇದರಿಂದ ನಿರಾಶೆಗೊಂಡ ಮೋಫಿಯಾ ನಂತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮೋಫಿಯಾ ಮತ್ತು ಮುಹಮ್ಮದ್ ಸುಹೇಲ್ ಫೇಸ್ಬುಕ್ ಮೂಲಕ ಭೇಟಿಯಾಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು, ನಂತ್ರ ಪ್ರೀತಿಸಲು ಶುರು ಮಾಡಿದ್ದರು. ಈ ವರ್ಷ ಏಪ್ರಿಲ್ ನಲ್ಲಿ ಮದುವೆಯಾಗಿದ್ದರು. ಆತ ಒಳ್ಳೆಯವನಲ್ಲ. ನಿನಗೆ ಸರಿ ಹೊಂದುವುದಿಲ್ಲವೆಂದು ಮೊಫಿಯಾ ತಂದೆ ಹೇಳಿದ್ದರಂತೆ.
ಮೊಫಿಯಾ ತಂದೆ ಪ್ರಕಾರ, ಮದುವೆಯ ಸಮಯದಲ್ಲಿ, ಮೊಹಮ್ಮದ್ ಸುಹೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಮದುವೆಯ ನಂತರ ಸುಹೇಲ್, ಸಿನಿಮಾ ನಿರ್ಮಾಪಕನಾಗುವ ಆಸೆ ಇದೆ ಎಂದಿದ್ದ. ಇದಕ್ಕಾಗಿ 40 ಲಕ್ಷ ವರದಕ್ಷಿಣೆ ನೀಡುವಂತೆ ಕಿರುಕುಳ ಶುರು ಮಾಡಿದ್ದನಂತೆ.