‘ದೇವರ ನಾಡು’ ಕೇರಳದಲ್ಲಿ ಮಳೆ ಇನ್ನಿಲ್ಲದ ಅವಾಂತರ ಸೃಷ್ಟಿಸಿದೆ. ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ವಯನಾಡಿನಲ್ಲಿ ಭೂಕುಸಿತಕ್ಕೆ ಹಳ್ಳಿಗಳೇ ಕೊಚ್ಚಿ ಹೋಗಿವೆ. ಈಗಾಗಲೇ ನೂರಾರು ಮಂದಿ ಸಾವನ್ನಪ್ಪಿದ್ದು, ಅಷ್ಟೇ ಸಂಖ್ಯೆಯಲ್ಲಿ ಜನ ಕಣ್ಮರೆಯಾಗಿದ್ದಾರೆ. ರಕ್ಷಣಾ ಪಡೆಗಳು ಬದುಕುಳಿದವರ ರಕ್ಷಣೆಗಾಗಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು ಎಡೆಬಿಡದೆ ಸುರಿಯುತ್ತಿರುವ ಮಳೆ, ಅಡ್ಡಿಯನ್ನುಂಟು ಮಾಡುತ್ತಿದೆ.
ವಯನಾಡಿನಲ್ಲಿ ಉಂಟಾದ ಭೂಕುಸಿತದ ಪರಿಣಾಮ ಕೆಲ ಕುಟುಂಬಗಳು ಸಂಪೂರ್ಣವಾಗಿ ನಿರ್ನಾಮವಾಗಿವೆ. ಇನ್ನು ಕೆಲವರು ಬದುಕುಳಿದರೂ ಸಹ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದವರನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಿಂದ ಟೀ ಹಾಗೂ ಕಾಫಿ ಎಸ್ಟೇಟ್ ಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಬಂದವರು ಅತಿಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ.
ಹೌದು, ತುಂಬು ಗರ್ಭಿಣಿಯಾಗಿದ್ದ ತನ್ನ ಪತ್ನಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಲು ಆಕೆಯ ಪತಿ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ಇಂತಹದೊಂದು ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಪತಿ ಸೇತುವೆ ಮೇಲೆ ನೀರು ಹರಿಯುತ್ತಿದ್ದನ್ನು ಕಂಡು ಕಂಗಾಲಾಗಿದ್ದಾನೆ. ಆದರೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೇಬೇಕಾದ ಕಾರಣ ಅಂತಹ ಪರಿಸ್ಥಿತಿಯ ನಡುವೆಯೂ ಮಾರುತಿ ಆಲ್ಟೋ ಕಾರನ್ನು ಯಶಸ್ವಿಯಾಗಿ ಚಲಾಯಿಸಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.