ತಿರುವನಂತಪುರ: ಕೇರಳದ ಆಸ್ಪತ್ರೆಯೊಂದು ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ಮೋರ್ಗನ್ ಫ್ರೀಮನ್ ಅವರ ಫೋಟೋವನ್ನು ಚರ್ಮದ ಚಿಕಿತ್ಸೆಯ ಜಾಹೀರಾತಿನಲ್ಲಿ ಬಳಸಿ, ಭಾರಿ ಟೀಕೆಗೆ ಗುರಿಯಾಗಿದೆ.
ವಡಕರ ಸಹಕಾರಿ ಆಸ್ಪತ್ರೆಯು ಸ್ಕಿನ್ ಟ್ರೀಟ್ಮೆಂಟ್ ವಿಧಾನವನ್ನು ಜಾಹೀರಾತು ಮಾಡಿದ ಸ್ಟಾಂಡಿ ಬೋರ್ಡ್‌ನಲ್ಲಿ ನಟನ ಫೋಟೋವನ್ನು ಸೇರಿಸಿದೆ. ಅದರಲ್ಲಿ ಇಬ್ಬರು ವೈದ್ಯರ ಹೆಸರಿನ ಜೊತೆಗೆ ಫೋನ್ ನಂಬರ್ ಅನ್ನು ಕೂಡ ಸೇರಿಸಲಾಗಿತ್ತು. ಜಾಹೀರಾತು ಬೋರ್ಡ್ ನಲ್ಲಿ ಚರ್ಮದ ಟ್ಯಾಗ್‌ಗಳು, ನರಹುಲಿಗಳು, ಮಿಲಿಯಾ ಮತ್ತು ಮೃದ್ವಂಗಿ ಚಿಕಿತ್ಸೆಯನ್ನು ಪಟ್ಟಿಮಾಡಿದೆ.
ಆಸ್ಪತ್ರೆಯ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮ್ಮ ಸೇವೆಯನ್ನು ಪ್ರಚಾರ ಮಾಡಲು ಫ್ರೀಮನ್ ಅವರ ಫೋಟೋ ಬಳಸಿದ್ದಕ್ಕಾಗಿ ಭಾರಿ ಟೀಕೆಗೆ ಗುರಿಯಾಗಿದೆ. ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ವಡಕರ ಆಸ್ಪತ್ರೆ ಕ್ಷಮೆ ಯಾಚಿಸಿದ್ದು, ತಕ್ಷಣವೇ ಬೋರ್ಡ್ ಅನ್ನು ತೆಗೆದುಹಾಕಲಾಗಿದೆ.
ಇನ್ನು ತಮ್ಮ ಆಸ್ಪತ್ರೆಯ ಚಿಕಿತ್ಸೆ ಬಗ್ಗೆ ಪ್ರಚಾರಕ್ಕಾಗಿ ಇಂಟರ್‌ನೆಟ್‌ನಿಂದ ಫೋಟೋ ಡೌನ್‌ಲೋಡ್ ಮಾಡಲಾಗಿತ್ತು. ಆದರೆ, ಈತ ಆಸ್ಕರ್ ವಿಜೇತ ನಟ ಎಂದು ತಿಳಿಯುವಲ್ಲಿ ಆಸ್ಪತ್ರೆ ವಿಫಲವಾಗಿದೆ ಎಂದು ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ಟಿ ಸುನಿಲ್ ವಿಷಾದ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಕ್ಷಮೆ ಯಾಚಿಸಿದೆ. ಶ್ರೇಷ್ಠ ನಟನ ಮಾನಹಾನಿ ಮಾಡುವ ಉದ್ದೇಶ ಇರಲಿಲ್ಲ ಎಂದು ಸುನೀಲ್ ತಿಳಿಸಿದ್ದಾರೆ.