ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿದ್ದ ಸಲಿಂಗಿಗಳನ್ನು ಕೇರಳ ಹೈಕೋರ್ಟ್ ಒಂದು ಮಾಡಿದೆ. ಈ ಸಲಿಂಗಿ ದಂಪತಿಗಳ ಸಂಬಂಧಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ದಂಪತಿ ಪ್ರತ್ಯೇಕವಾಗಿದ್ದರು. ಆದರೆ, ಈ ಬಗ್ಗೆ ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್ ಇವರಿಬ್ಬರನ್ನು ಒಂದುಗೂಡಿಸಿದೆ.
ಎರ್ನಾಕುಲಂ ನಿವಾಸಿ ಮಹಿಳೆ ಮತ್ತು ಕೋಝಿಕೋಡ್ ನಿವಾಸಿ ಮಹಿಳೆಯೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದರು. ಇವರಿಬ್ಬರೂ ಸಲಿಂಗಿಗಳಾಗಿದ್ದು, ಪರಸ್ಪರ ದಂಪತಿಯಂತೆ ಜೀವನ ನಡೆಸುತ್ತಿದ್ದರು. ಆದರೆ, ಈ ಸಂಬಂಧವನ್ನು ಒಪ್ಪದ ಕೋಝಿಕೋಡ್ ಮಹಿಳೆಯ ಪೋಷಕರು ತಮ್ಮ ಮಗಳನ್ನು ಕೊಂಡೊಯ್ದಿದ್ದರು.
ಈ ಹಿನ್ನೆಲೆಯಲ್ಲಿ ಎರ್ನಾಕುಲಂನ ಮಹಿಳೆಯು ಬೇರ್ಪಟ್ಟಿರುವ ತನ್ನ ಸಂಗಾತಿಯನ್ನು ಹುಡುಕಿಸಿಕೊಡುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಳು. ತನ್ನ ಸಂಗಾತಿಯನ್ನು ಅವರ ಪೋಷಕರು ಒತ್ತಾಯಪೂರ್ವಕವಾಗಿ ಕೊಂಡೊಯ್ದಿದ್ದಾರೆ. ಹೀಗಾಗಿ ಸಂಗಾತಿಯನ್ನು ಪತ್ತೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಳು.
ಮಗುವನ್ನು ಬೆನ್ನಿಗೆ ಕಟ್ಟಿಕೊಂಡೇ ಕಾರ್ಯ ನಿರ್ವಹಿಸಿದ ನೈರ್ಮಲ್ಯ ಕಾರ್ಯಕರ್ತೆ; ಕರ್ತವ್ಯ ಪರತೆಗೆ ನೆಟ್ಟಿಗರು ಫಿದಾ
ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕೋಝಿಕೋಡ್ ನಿವಾಸಿ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಆದೇಶ ನೀಡಿತ್ತು. ನಾವಿಬ್ಬರೂ ವಯಸ್ಕರರಾಗಿರುವುದರಿಂದ ಒಟ್ಟಿಗೆ ಜೀವನ ಸಾಗಿಸಲು ಅನುಮತಿ ನೀಡಬೇಕೆಂದು ಮಹಿಳೆ ಕೋರಿದ್ದಳು.
ಅಲ್ಲದೇ, ಈ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲೂ ಹಂಚಿಕೊಂಡಿದ್ದ ಮಹಿಳೆಯು ನನ್ನ ಸ್ನೇಹಿತೆಯನ್ನು ಆಕೆಯ ಪೋಷಕರು ಬಲವಂತವಾಗಿ ನನ್ನಿಂದ ಬೇರ್ಪಡಿಸಿದ್ದಾರೆ. ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಆಕೆಯನ್ನು ವಾಪಸ್ ಕರೆ ತರುವಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.
ಈ ಮಧ್ಯೆ, ಪೊಲೀಸರು ನಾವು ಆರಂಭದಿಂದಲೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೆವು. ಆದರೆ, ಕೋಝಿಕೋಡ್ ನಿವಾಸಿ ಮಹಿಳೆಯು ನಾನು ನನ್ನ ಪೋಷಕರೊಂದಿಗೆ ನನ್ನಿಷ್ಟದಂತೆ ಬದುಕುತ್ತಿದ್ದೇನೆ ಎಂದು ಲಿಖಿತ ಹೇಳಿಕೆ ನೀಡಿದ್ದಳು ಎಂದು ತಿಳಿಸಿದ್ದಾರೆ.
ಈ ಎಲ್ಲಾ ವಿಚಾರಗಳ ಬಗ್ಗೆ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಇವರಿಬ್ಬರು ಒಟ್ಟಿಗೆ ಜೀವಿಸಲು ಅಡ್ಡಿಯಿಲ್ಲ ಎಂದು ಹೇಳುವ ಮೂಲಕ ಸಲಿಂಗಿ ಮಹಿಳಾ ದಂಪತಿಗೆ ಒಟ್ಟಾಗಿ ಜೀವಿಸಲು ಅನುಮತಿಯನ್ನು ನೀಡಿದೆ.