ಕೇರಳ ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ವ್ರತಧಾರಿಯಾಗಿ ಇರುಮುಡಿ ಕಟ್ಟಿ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ.
ಭಾನುವಾರ ಸಂಜೆ ಪಂಪೆಗೆ ಆಗಮಿಸಿದ ರಾಜ್ಯಪಾಲರು ಒಂದು ಗಂಟೆ ಬಳಿಕ ಗಣಪತಿ ದೇವಾಲಯಕ್ಕೆ ತೆರಳಿ ಇರುಮುಡಿ ಕಟ್ಟಿಸಿಕೊಂಡಿದ್ದಾರೆ. ಮುಖ್ಯ ಅರ್ಚಕರಾದ ಸುರೇಶ ಆರ್. ಪೋತ್ತಿ, ನಾರಾಯಣ ಪೋತ್ತಿ ಅವರು ಇರುಮುಡಿ ಕಟ್ಟುವ ಪ್ರಕ್ರಿಯೆ ನಡೆಸಿದ್ದಾರೆ. ಪಲ್ಲಕ್ಕಿಯಲ್ಲಿ ತೆರಳಲು ವ್ಯವಸ್ಥೆ ಮಾಡಿದ್ದರೂ, ಕಾಲ್ನಡಿಗೆ ಮೂಲಕ ಬೆಟ್ಟವೇರಿದ ರಾಜ್ಯಪಾಲರು 40 ನಿಮಿಷದಲ್ಲಿ ಮರಕೂಟ್ಟಂ ತಲುಪಿದ್ದಾರೆ. ನಂತರ ಅಯ್ಯಪ್ಪನ ಸನ್ನಿಧಾನ ತಲುಪಿದ ಅವರು 18 ಮೆಟ್ಟಿಲೇರಿ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.
ರಾಜ್ಯಪಾಲರನ್ನು ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್. ವಾಸು ಬರಮಾಡಿಕೊಂಡಿದ್ದಾರೆ. ಅಯ್ಯಪ್ಪ ಸ್ವಾಮಿ ನೋಡಿ ಧನ್ಯನಾಗಿದ್ದೇನೆ, ಮನಸ್ಸು ತುಂಬಿ ಬಂದಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.