ಕೇರಳದಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ತಿಕ್ಕಾಟ ಜೋರಾಗಿದೆ. ಇದೀಗ ಈ ಘರ್ಷಣೆ ಮತ್ತೊಂದು ಹಂತಕ್ಕೆ ಹೋಗಿದ್ದು ರಾಜ್ಯಪಾಲರನ್ನು ವಿಶ್ವವಿದ್ಯಾನಿಲಯಗಳ ಕುಲಪತಿ ಸ್ಥಾನದಿಂದ ತೆಗೆದುಹಾಕಲು ಕೇರಳ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿದೆ.
ಹಲವು ದಿನಗಳಿಂದ ತೀವ್ರವಾಗಿ ಹೆಚ್ಚುತ್ತಿರುವ ಘರ್ಷಣೆಯಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ವಜಾಗೊಳಿಸಲು ಕೇರಳದ ಎಡ ನೇತೃತ್ವದ ಸರ್ಕಾರ ಇಂದು ನಿರ್ಧರಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂಪುಟವು ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕಲು ಸುಗ್ರೀವಾಜ್ಞೆ ಅಥವಾ ವಿಶೇಷ ಆದೇಶವನ್ನು ತರಲು ಮತ ಹಾಕಿತು. ರಾಜ್ಯದ ಎಲ್ಲಾ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳನ್ನು ರಾಜೀನಾಮೆ ನೀಡುವಂತೆ ಮೊಹಮ್ಮದ್ ಖಾನ್ ಅವರು ಕೇಳಿದ ನಂತರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕುಲಪತಿ ಸ್ಥಾನಕ್ಕೆ ತಜ್ಞರೊಬ್ಬರನ್ನು ತರಲು ರಾಜ್ಯ ಸಚಿವ ಸಂಪುಟ ಮುಂದಾಗಿದೆ.